ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಎಐಸಿಸಿ ಅಧ್ಯಕ್ಷರಿಗಿಂತ ದೊಡ್ಡವರು ಮತ್ತು ಹೈಕಮಾಂಡ್ ಎಂಬುದು ಇದೀಗ ಸ್ಪಷ್ಟಗೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಕಾಂಗ್ರೆಸ್ಸಿನ ಪರಿಸ್ಥಿತಿ; ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ವೇಣುಗೋಪಾಲರನ್ನು ಭೇಟಿ ಮಾಡಿದ್ದಾರೆ. ಯಾವುದೋ ಒಬ್ಬ ವ್ಯಕ್ತಿಯ ಕೈಯಲ್ಲಿ ಹೈಕಮಾಂಡಿನ ಶಕ್ತಿ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರದ ಒಳಗೆ ನಡೆದಿರುವ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರೇ ಬೆಂಗಳೂರಿಗೆ ಬಂದು 3-4 ದಿನಗಳ ಕಾಲ ಎಲ್ಲರನ್ನೂ ಕರೆದು ಮಾತುಕತೆ ಮಾಡಿದ್ದರು; ಇದನ್ನು ಪರಿಹರಿಸಲು ನನಗೆ ಅಸಾಧ್ಯ; ನನಗೆ ಬಹಳ ಬೇಸರವಾಗಿದೆ. ನಾನು ಇದನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿ ಇಲ್ಲಿಂದ ಹೊರಟುಹೋಗಿದ್ದರು ಎಂದು ವಿವರಿಸಿದರು. ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಇರುವಾಗ ಇವರು ಯಾಕೆ ಹೀಗೆ ಮಾತನಾಡಿದರೆಂದು ರಾಜ್ಯದ ಜನರಿಗೆ ಗೊಂದಲವಾಗಿತ್ತು ಎಂದರು.
ಸಿಎಂ, ಡಿಸಿಎಂ ಪೈಪೋಟಿ- ಸಮಸ್ಯೆ ಕೇಳುವವರಿಲ್ಲ..
ಕಾಂಗ್ರೆಸ್ ಕೈಯಲ್ಲಿ ಬಂಡವಾಳವಿಲ್ಲ; ಬಂಡವಾಳ ನೀಡುವ ಒಂದೇ ಒಂದು ರಾಜ್ಯ ಅದು ಕರ್ನಾಟಕ. ಈಗ ಇವರು ಇಬ್ಬರನ್ನೂ ತೂಕ ಮಾಡುತ್ತಿದ್ದಾರೆ. ಇದರಿಂದ ಹೇಗಾದರೂ ಸರಿ ಅಧಿಕಾರದಲ್ಲಿ ಉಳಿಯಬೇಕೆಂದು ಸಿದ್ದರಾಮಯ್ಯ, ಹೇಗಾದರೂ ಪಡೆದುಕೊಳ್ಳಬೇಕೆಂದು ಡಿ.ಕೆ.ಶಿವಕುಮಾರ್ ಅವರು ಪೈಪೋಟಿಗೆ ಬಿದ್ದಿದ್ದಾರೆ. ರಾಜ್ಯದ ಸ್ಥಿತಿಯನ್ನು ಗಂಭೀರ ಮಾಡಿದ್ದಾರೆ. ಜೊತೆಗೆ ಅನೇಕ ಜ್ವಲಂತ ಸಮಸ್ಯೆಗಳಿವೆ. ರೈತರ ಸಮಸ್ಯೆ ಕೇಳುವವರಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಈ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ದಲಿತರ ಕುರಿತು ಭಾಷಣ ಮಾಡುತ್ತಾರೆಯೇ ಹೊರತು ಅವರ ಯೋಗಕ್ಷೇಮ ವಿಚಾರಿಸುವವರಿಲ್ಲ ಎಂದು ಆಕ್ಷೇಪಿಸಿದರು. ದಲಿತ ನಾಯಕರೂ ಮಾತನಾಡುವುದಿಲ್ಲ; ಅವರಿಗೆ ಕಾಂಗ್ರೆಸ್ ಉಳಿಯುವುದು ಮುಖ್ಯವೇ ಹೊರತು ಅವರ ಸಮುದಾಯ ಮುಖ್ಯವಾಗಿ ಕಾಣುತ್ತಿಲ್ಲ ಎಂದು ದೂರಿದರು.
ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸದಿರಿ..
8ರಿಂದ ಬೆಳಗಾವಿಯಲ್ಲಿ ಸದನ ಆರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದ ವಿಷಯಗಳನ್ನು ಚರ್ಚಿಸಲು ಅಲ್ಲಿ ಅಧಿವೇಶನ ಮಾಡಲಾಗುತ್ತದೆ. ಆದರೆ, ಈಗಾಗಲೇ 31 ಮಸೂದೆಗಳು ಸಿದ್ಧವಿದ್ದವು. ಅದಲ್ಲದೇ, ಈಗ ಮತ್ತೆ 21 ಮಸೂದೆಗಳು ಇರುವುದಾಗಿ ತಿಳಿದುಬಂದಿದೆ. ಇದು ಬಿಲ್ ಪಾಸ್ (ಮಸೂದೆ ಅಂಗೀಕಾರ) ಅಧಿವೇಶನವೇ? ಎಂದು ಕೇಳಿದರು. ಅಧಿವೇಶನದ ಅವಧಿ 9-10 ದಿನಗಳು. ಇದರಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸದಿರಿ ಎಂದು ಆಗ್ರಹಿಸಿದರು.
ಸರಕಾರ ತಾರತಮ್ಯ ಮಾಡುವ ಕುರಿತು ರಾಜು ಕಾಗೆಯವರು ಆಪಾದಿಸಿದ್ದು, ಪ್ರತ್ಯೇಕ ರಾಜ್ಯದ ಕುರಿತು ಮಾತನಾಡಿದ್ದಾರೆ. ನೀವು ತಾರತಮ್ಯ ಮಾಡಿದರೆ ಇಂಥ ಕೂಗು ಹೆಚ್ಚಾಗುತ್ತದೆ ಎಂದು ಗಮನ ಸೆಳೆದರು. ಕಾಂಗ್ರೆಸ್ಸಿನವರು ರಾಜ್ಯ- ದೇಶ ಒಡೆಯುವುದರಲ್ಲಿ ನಿಪುಣರು ಎಂದು ಆಪಾದಿಸಿದರು. ಉತ್ತರ ಪ್ರದೇಶ, ಛತ್ತೀಸಗಡ, ಆಂಧ್ರವನ್ನು ಒಡೆದಿದ್ದಾರೆ. ಈಗ ಕರ್ನಾಟಕವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ತಿಳಿಸಿದರು.
ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ಲಕ್ಷಾಧಿಪತಿಯಾಗಬಲ್ಲಿರಿ








