ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಗ್ರಾಪಪಂಚಾಯಿತಿ ಸಿಬ್ಬಂದಿಗಳಿಗೆ ಪಿಎಫ್, ಇಎಸ್ ಐ ಸೌಲಭ್ಯ ಸಿಗಲಿದೆ.
ಹೌದು, ಗ್ರಾಮ ಪಂಚಾಯ್ತಿ ನೌಕರರ ಬಹು ದಿನಗಳ ಬೇಡಿಕೆಯಾದ ಭವಿಷ್ಯ ನಿಧಿ (EPF) ಮತ್ತು ಆರೋಗ್ಯ ವಿಮೆ ಯೋಜನೆ (ESI) ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯಿತಿಗಳು ಮುಂದಾಗಿದ್ದು, ಇದೀಗ ರಾಜ್ಯದ ಬೆಂಗಳೂರು ಗ್ರಾಮಾಂತರ, ಮಂಗಳೂರು, ಧಾರವಾಡ, ಉಡುಪಿ ಜಿಲ್ಲಾ ಪಂಚಾಯತ್ ಗಳು ಗ್ರಾಮಪಂಚಾಯಿತಿ ನೌಕರರ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಉಳಿದ ಜಿಪಂಗಳಲ್ಲೂ ಶೀಘ್ರವೇ ಜಾರಿಯಾಗಲಿದೆ ಎನ್ನಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿ, ನೇಮಕಾತಿ ವಿಧಾನ ಹಾಗೂ ಇತರ ಸೇವಾ ಷರತ್ತುಗಳು) ನಿಯಮಗಳು 2022ರಲ್ಲಿನ ತಿದ್ದುಪಡಿ ಪ್ರಕಾರ ಜಿಲ್ಲೆಯ ಪ್ರತಿ ತಾಲೂಕು ಪಂಚಾಯಿತಿ ವ್ಯಾಪ್ತಿಯನ್ನು ಅನುಷ್ಠಾನ ಘಟಕವಾಗಿ ಪರಿಗಣಿಸಿ, ಗ್ರಾಪಂಗಳ ಅನುಮೋದಿತ ಸಿಬ್ಬಂದಿಗೆ ಭವಿಷ್ಯ ನಿಧಿ ಹಾಗೂ ಇಎಸ್‌ಐ ಸೌಲಭ್ಯ ಜಾರಿಗೆ ತರಲಾಗಿದೆ. ನೌಕರ ತನ್ನ ಮೂಲವೇತನ ಹಾಗೂ ತುಟ್ಟಿಭತ್ಯೆಯ ಶೇ.12ರಷ್ಟು ಪಾವತಿಸಿದರೆ ಸಂಬಂಧಿತ ಗ್ರಾಪಂ ತನ್ನ ಪಾಲನ್ನು ನೌಕರನ ಪಿಎಫ್ ವಂತಿಗೆಗೆ ಸಮನಾಗಿ ಪಾವತಿ ಮಾಡಬೇಕು. ಇಎಸ್‌ಐಗೆ ನೌಕರ ಶೇ. 0.75ರಷ್ಟು ಹಾಗೂ ಗ್ರಾಪಂ ತನ್ನ ಪಾಲಾಗಿ ಶೇ.3.25 ಪಾವತಿಸಲಿದೆ ಎಂದು ಹೇಳಲಾಗಿದೆ.








