ಬೆಂಗಳೂರು; ತಾಂತ್ರಿಕ ಕೌಶಲ್ಯದ ಜಾಗತಿಕ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಧನುಷ್ ಒದಗಿಸಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯ ಗ್ರಾಮೀಣ ಯುವ ಪ್ರತಿಭೆ ಧನುಷ್ ಎಂ.ಜಿ. ವರ್ಲ್ಡ್‌ಸ್ಕಿಲ್ಸ್ ಏಷ್ಯಾ 2025 (ತೈಪೆ, ತೈವಾನ್ ದೇಶ) ಸ್ಪರ್ಧೆಯಲ್ಲಿ Electrical Installation ವಿಭಾಗದಲ್ಲಿ “Medallion of Excellence” ಪದಕ ಪಡೆದು ದೇಶದ ಧ್ವಜವನ್ನು ಎತ್ತಿ ಹಿಡಿದಿದ್ದಾರೆ.
ಇದು ಗವರ್ನಮೆಂಟ್ ಟೂಲ್ ರೂಂ ಆಂಡ್ ಟ್ರೈನಿಂಗ್ ಸೆಂಟರ್ (ಜಿಟಿಟಿಸಿ) ಇತಿಹಾಸದಲ್ಲೇ ಮೊದಲ ವರ್ಲ್ಡ್‌ಸ್ಕಿಲ್ಸ್ ಏಷ್ಯಾ ಪದಕವಾಗಿದೆ. ಕರ್ನಾಟಕದ ಗ್ರಾಮೀಣ ಭಾಗದಿಂದ ಬಂದ ಯುವಜನರಿಗೆ ದೊಡ್ಡ ಸ್ಫೂರ್ತಿಯಾಗಿದೆ.

ಮಧುಗಿರಿಯ ಗೋವಿಂದರಾಜ್ ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರ ಧನುಷ್, ಮಧುಗಿರಿಯ SM ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರೈಸಿ, ಗೌರಿಬಿದನೂರು ಜಿಟಿಟಿಸಿಯಲ್ಲಿ ಮೆಕಾಟ್ರಾನಿಕ್ಸ್ ಡಿಪ್ಲೊಮಾ ಪಡೆದರು. ಬಳಿಕ ಬೆಂಗಳೂರು ಜಿಟಿಟಿಸಿಯಲ್ಲಿ ಒಂದು ವರ್ಷದ ಇನ್-ಪ್ಲಾಂಟ್ ತರಬೇತಿ ಮತ್ತು ವಿಶೇಷ Electrical Installation ತರಬೇತಿ ಪಡೆದರು.
2024ರಲ್ಲಿ India Skills ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ಧನುಷ್, ಭಾರತದ ಅಧಿಕೃತ ಪ್ರತಿನಿಧಿಯಾಗಿ ತೈಪೆಗೆ ಆಯ್ಕೆಯಾದರು. ಏಷ್ಯಾದ ದಿಗ್ಗಜ ದೇಶಗಳ ಕುಶಲಕರ್ಮಿಗಳೊಂದಿಗೆ ನಡೆದ ತೀವ್ರ ಸ್ಪರ್ಧೆಯಲ್ಲಿಯೂ ತಾಂತ್ರಿಕ ನಿಖರತೆ, ಸಮಯ ನಿರ್ವಹಣೆಯಿಂದ ಈ ಪದಕವನ್ನು ಪಡೆದಿದ್ದಾರೆ.

ಧನುಷ್ ಅವರ ಈ ಸಾಧನೆಗೆ ರಾಜ್ಯದ ಯುವಜನತೆ, ಜಿಟಿಟಿಸಿ ಕುಟುಂಬ, ಗ್ರಾಮದ ಜನತೆ ಹಾಗೂ ಶಿಕ್ಷಕ ವರ್ಗ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.
“ ಕೌಶಲ್ಯಕ್ಕೆ ಗಡಿ-ನಾಡಿಲ್ಲ” ಎಂಬ ಸಂದೇಶವನ್ನು ಗ್ರಾಮೀಣ ಯುವ ಪ್ರತಿಭೆ ಧನುಷ್ ಎಂ.ಜಿ. ಈಗ ಪ್ರಪಂಚಕ್ಕೆ ತಲುಪಿಸಿದ್ದಾರೆ.








