ನವದೆಹಲಿ : ದೇಶದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಕುರಿತು ಏಕೀಕೃತ ತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ಆದೇಶಿಸಿದೆ. ಜತೆಗೆ, ಸಿಬಿಐ ತನಿಖೆಗೆ ಸಮ್ಮತಿ ನೀಡಬೇಕೆಂದು ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಾದ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ನಿರ್ದೇಶನ ನೀಡಿದೆ.
ಡಿಜಿಟಲ್ ಅರೆಸ್ಟ್, ಹೂಡಿಕೆ ಹಗರಣ ಮತ್ತು ಪಾರ್ಟ್ ಟೈಂ ಜಾಬ್ ಹೀಗೆ ಆನ್‌ಲೈನ್ ಮೂಲಕ ಮೂರು ರೀತಿ ಜನರನ್ನು ವಂಚಿಸಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗುತ್ತಿದೆ. ಇವುಗಳಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಸಿಬಿಐ ಆದ್ಯತೆ ಮೇಲೆ ತನಿಖೆ ನಡೆಸುವ ಅಗತ್ಯವಿದೆ. ಹೀಗಾಗಿ ಸಿಬಿಐ ಮೊದಲಿಗೆ ಡಿಜಿಟಲ್ ಅರೆಸ್ಟ್ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕು. ನಂತರ ಉಳಿದ 2 ವಿಷಯಗಳ ಬಗ್ಗೆ ತನಿಖೆ ನಡೆಸಬೇಕು. ಈ ಕುರಿತ ತನಿಖೆಗೆ ಅಗತ್ಯಬಿದ್ದರೆ ಇಂಟರ್‌ಪೋಲ್ ನೆರವನ್ನೂ ಪಡೆಯಬೇಕು ಎಂದು ಸೂಚಿಸಿತು.
ಪ್ರಕರಣ ಏನು?
ಹರ್ಯಾಣದ ಹಿರಿಯ ದಂಪತಿ ಸೈಬರ್ ಕ್ರಿಮಿನಲ್‌ಗಳಿಂದಾಗಿ ಜೀವಮಾನವಿಡೀ ದುಡಿದ ಹಣ ಕಳೆದುಕೊಂಡ ಪ್ರಕರಣ ಪ್ರಕರಂಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್ ಮತ್ತು ನ್ಯಾ. ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠ ಈ ಮಹತ್ವದ ಆದೇಶ ನೀಡಿದೆ. ಗೃಹ ಸಚಿವಾಲಯ, ದೂರಸಂಪರ್ಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೂಡ ಈ ಸಂಬಂಧ ತಮ್ಮ ಅಭಿಪ್ರಾಯಗಳನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ಸಲ್ಲಿಸಬೇಕು ಎಂದು ಅದು ಹೇಳಿತು.








