ಬೆಂಗಳೂರು : ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು, ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯವು 5 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಅವರು ಸೂಚನೆ ನೀಡಿದ್ದು, ಸಾಗಣೆ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ”ರಾಜ್ಯದಲ್ಲಿ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ರೈತರಿಗೆ ನೆರವಾಗಲು ರಾಜ್ಯ ಸರಕಾರ ಸಾಧ್ಯವಿರುವ ಎಲ್ಲಕ್ರಮಗಳನ್ನು ಕೈಗೊಳ್ಳುತ್ತಿದೆ. ಪಶು ಹಾಗೂ ಕುಕ್ಕುಟ ಆಹಾರ ಉತ್ಪಾದಕರು ಕೇಂದ್ರ ಸರಕಾರ ನಿಗದಿಪಡಿಸಿರುವ 2400 ರೂ. ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ಸೂಚನೆ ನೀಡಿದರು.
ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕುಸಿತದಿಂದ ತೊಂದರೆಗೆ ಸಿಲುಕಿರುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಡಿಸ್ಟಿಲರಿಗಳು 7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದರೆ, ಕೆಎಂಎಫ್ 50,000 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಾಗೆಯೇ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯ ಇಂಡೆಂಟ್ ನೀಡಿ 5 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಯನ್ನು ತಕ್ಷಣ ಪ್ರಾರಂಭಿಸಬೇಕು, ಎಂದು ಸೂಚಿಸಿದರು.








