ಉಡುಪಿ : ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಕನಕ ಕಿಂಡಿಗೆ ನಾನು ಸೇವಾ ರೂಪದಲ್ಲಿ ಸ್ವರ್ಣ ಕವಚವನ್ನು ಸಮರ್ಪಿಸಿದ್ದೇನೆ. ಇದರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿರುವುದು ನನಗೆ ನನಗೆ ತುಂಬಾ ಸಂತೋಷ ತಂದಿದೆ. ಈ ಸಂದರ್ಭದಲ್ಲಿ ನನಗೂ ಭಾಗವಹಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಕಾರಣಾಂತರದಿಂದ ನನಗೆ ಅವಕಾಶ ತಪ್ಪಿ ಹೋಗಿದೆ. ಇದನ್ನು ಯಾರು ತಪ್ಪಿಸಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರ ಜೊತೆಯಾಗಿ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಎಲ್ಲ ಊಹಾಪೋಹಗಳಿಗೂ ಮಾಜಿ ಸಚಿವರು ಉತ್ತರಿಸಿದ್ದಾರೆ.ತಮ್ಮ ಹಿಂದಿನ ಹೇಳಿಕೆಗಳಲ್ಲಿ ಅಸಮಾಧಾನದ ಭಾವನೆ ಇರಲಿಲ್ಲ. ನನ್ನ ಸೇವೆಯನ್ನು ಪ್ರಧಾನಿ ಉದ್ಘಾಟಿಸಿರುವುದು ನನಗೆ ಅಪಾರ ಸಂತೋಷ ಎಂದು ಅವರು ಪುನರುಚ್ಛರಿಸಿದ್ದಾರೆ. ಮಠದವರಾಗಲಿ, ಜಿಲ್ಲಾ ಬಿಜೆಪಿ ನಾಯಕರಾಗಲಿ ಯಾರೂ ಕೂಡ ನನ್ನ ಕಡೆಗಣಿಸಿದ್ದಾರೆ ಎನಿಸುತ್ತಿಲ್ಲ. ಅದನ್ನು ಹುಡುಕುವ ಪ್ರಯತ್ನವನ್ನೂ ನಾನು ಮಾಡಿಲ್ಲ ಎಂದಿದ್ದಾರೆ.
ಇದನ್ನು ಯಾರು ತಪ್ಪಿಸಿದ್ದಾರೆಂದು ನನಗೆ ಗೊತ್ತಿಲ್ಲ. ಇಂತಹವರು ತಪ್ಪಿಸಿದ್ದಾರೆ ಎಂಬುದಾಗಿ ಊಹೆ ಮಾಡಲು ಕೂಡ ನಾನು ಬಯಸುವುದಿಲ್ಲ. ನಾನು ಅಲ್ಲಿಗೆ ಹೋಗದಂತೆ ಯಾರು ತಡೆದಿದ್ದಾರೆಂಬುದು ಕೂಡ ನನಗೆ ಗೊತ್ತಿಲ್ಲ. ಹಾಗಾಗಿ ಯಾರ ಮೇಲೆಯೂ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುವುದಿಲ್ಲ. ಯಾರಾದರೂ ತಪ್ಪಿಸಿದ್ದರೆ ಅದು ಅವರ ರಾಜಕೀಯ ತಪ್ಪು ಹೆಜ್ಜೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.








