ಚಾಮರಾಜನಗರ: ತಂದೆಯ ನಿಧನದ ಬೆನ್ನಲ್ಲೇ ಪುತ್ರನೂ ಕೊನೆಯುಸಿರೆಳೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಣಗಳ್ಳಿದೊಡ್ಡಿಯಲ್ಲಿ ನಡೆದಿದೆ. ಅಣಗಳ್ಳಿ ದೊಡ್ಡಿ ಗ್ರಾಮದ ನಿವಾಸಿ ಮಲ್ಲಣ್ಣ (54) ಮೃತರು. ಇವರು ಶಿಕ್ಷಕರಾಗಿದ್ದರು.
ಮಲ್ಲಣ್ಣ ಅವರ ತಂದೆ ದೊಡ್ಡಲಿಂಗಯ್ಯ ವಯೋಸಹಜವಾಗಿ ಮೃತಪಟ್ಟಿದ್ದರು. ಶನಿವಾರ ಇವರ ಅಂತ್ಯಕ್ರಿಯೆ ಮುಗಿಸಿ ಬಂದು ಮಲಗಿದ್ದ ಪುತ್ರ ಕೂಡ ಇಂದು ಕೊನೆಯುಸಿರೆಳೆದಿದ್ದಾರೆ. ಹಲಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಣ್ಣ ಮೃದು ಸ್ವಭಾವದವರಾಗಿದ್ದರು.
ಇಂದು ಸಂಜೆ ಮಲ್ಲಣ್ಣ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು. ಮಲ್ಲಣ್ಣ ಮೇಷ್ಟ್ರು ಎಂದೇ ಜನಜನಿತವಾಗಿದ್ದ ಇವರು ಶಿಸ್ತಿಗೆ ಹೆಸರುವಾಸಿಯಾಗಿದ್ದರು. ತಂದೆ ಇಲ್ಲದ್ದನ್ನು ಅರಗಿಸಿಕೊಳ್ಳಲಾಗದೇ ಅವರಿಗೆ ಹೃದಯಾಘಾತವಾಗಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.








