ಮಂಡ್ಯ :- ಯುವಕನೋರ್ವನನ್ನು ಕೊಲೆ ಮಾಡಲು ಯತ್ನಿಸಿ ವಿಫಲವಾಗಿರುವ ಘಟನೆ ಮದ್ದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಜರುಗಿದೆ.
ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ವೆಂಕಟೇಶ್ ಅವರ ಪುತ್ರ ಮಧು (28) ಗಾಯಗೊಂಡಿರುವ ಯುವಕ ಎನ್ನಲಾಗಿದೆ.
ಕೊಕ್ಕರೆ ಬೆಳ್ಳೂರು ಗ್ರಾಮದ ಮಧು ಎಂಬುವವರು ಪೂಜಾ ಕುಣಿತ ಕೆಲಸ ಮಾಡುತ್ತಿದ್ದು, ಅದೇ ಗ್ರಾಮದ ಲಾವಣ್ಯ (19) ಎಂಬ ಯುವತಿಯನ್ನು ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ಕಳೆದ 7 ತಿಂಗಳ ಹಿಂದೆ ಮದುವೆಯಾಗಿದ್ದರು.
ಈ ವಿಚಾರವಾಗಿ ಆಕ್ರೋಶಗೊಂಡಿದ್ದ ಯುವತಿಯ ಕುಟುಂಬದವರು ಮಧು ವಿರುದ್ದ ಸೇಡು ತೀರಿಸಿಕೊಳ್ಳಲು ಸಂಚುರೂಪಿಸಿದ್ದರು. ಹೀಗಾಗಿ ಕೊಕ್ಕರೆ ಬೆಳ್ಳೂರು ಗ್ರಾಮದ ವಿಶ್ವ ಎಂಬುವವರಿಗೆ ಈ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ 2-3 ತಿಂಗಳಿಂದ ಮಧು ಅವರನ್ನು ವಿಶ್ವ ಹಾಗೂ ಆತನ ಸಹಚರರು ಹಿಂಬಾಲಿಸಿ ಕೊಲೆ ಮಾಡಲು ಯತ್ನಕ್ಕೆ ಪ್ರಯತ್ನ ಮಾಡಿದ್ದಾರೆ.
ಮಧು ಅವರು ಶುಕ್ರವಾರ ಬೆಳಿಗ್ಗೆ ಕೊಕ್ಕರೆ ಬೆಳ್ಳೂರಿಂದ ಬೆಂಗಳೂರಿಗೆ ಪೂಜಾ ಕುಣಿತದಲ್ಲಿ ಪಾಲ್ಗೋಳ್ಳಲು ತೆರಳುತ್ತಿದ್ದ ವೇಳೆ ಆಲೂರು ಗ್ರಾಮದ ಶ್ರೀ ಬೀರೇಶ್ವರ ದೇವಾಲಯದ ಬಳಿ ಆಗಮಿಸುತ್ತಿದ್ದ ವೇಳೆ ಹೊಂಚು ಹಾಕಿ ಕುಳಿತ್ತಿದ್ದ ವಿಶ್ವ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಬೆನ್ನು, ಕೈ ಹಾಗೂ ಎದೆ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ತಕ್ಷಣವೇ ಹಿಂದೆಯೇ ಬರುತ್ತಿದ್ದ ಆತನ ಅಣ್ಣ ರಾಜೇಶ್ ಹಲ್ಲೆ ನಡೆಸುತ್ತಿರುವುದನ್ನು ಕೂಗಾಟ ಚೀರಾಟ ನಡೆಸಿದ ಪರಿಣಾಮ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ತಕ್ಷಣವೇ ಗಾಯಾಳು ಮಧು ಅವರನ್ನು ರಾಜೇಶ್ ಮತ್ತು ಸ್ನೇಹಿತರು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮದ್ದೂರು ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ








