ಬೆಂಗಳೂರು : ರಾಜ್ಯದಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದು, ಸದ್ಯದಲ್ಲೇ ನೇಮಕಾತಿ ಮಾಡಲಾಗುತ್ತದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈಗ ಅವರನ್ನು ವರ್ಗಾವಣೆ ಮಾಡಿ ಕಳುಹಿಸದೆ, ಶೈಕ್ಷಣಿಕ ವರ್ಷ ಮುಗಿದ ನಂತರವೇ ವರ್ಗಾಯಿಸಲು ಸೂಚಿಸಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ಜಿಲ್ಲಾ ಪಂಚಾಯತ್ ಅವರಣದಲ್ಲಿ ಇಂದು ಮಾತನಾಡಿದ ಅವರು, ದೈಹಿಕ ಶಿಕ್ಷಕರನ್ನು ಅತಿಥಿ ಶಿಕ್ಷಕರಂತೆ ನೇಮಕಾತಿ ಮಾಡಲು ಆಗುವುದಿಲ್ಲ. ಒಟ್ಟಾರೆ 18 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಈ ಹಿಂದೆ ನಾನೇ ಹೇಳಿದ್ದೇನೆ. ಅದರಲ್ಲಿ ದೈಹಿಕ ಶಿಕ್ಷಕರೂ ಸೇರಿದ್ದಾರೆ. ಆದಷ್ಟು ಬೇಗ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಶಿವಮೊಗ್ಗದ ದುರ್ಗಿಗುಡಿಯಲ್ಲಿ ಶಿಕ್ಷಕರ ಕೊರತೆ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ನೂರಾರು ವರ್ಷದ ಶಾಲೆ ಇದು. ಶೀಘ್ರವಾಗಿ ಶಿಕ್ಷಕರ ಕೊರತೆ ಪರಿಹರಿಸುವ ಕಾರ್ಯ ಮಾಡುತ್ತೇನೆ. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ ಇಲಾಖೆಯ ಎರಡು ಮಸೂದೆಳನ್ನು ಮಂಡಿಸಲಾಗುತ್ತದೆ ಎಂದು ತಿಳಿಸಿದರು.








