ಬೆಂಗಳೂರು : ಬೆಂಗಳೂರಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತ್ನಿಯೊಬ್ಬಳು ತನ್ನ ಪತಿಗೆ ಚಟ್ಟ ಕಟ್ಟಿರುವ ಘಟನೆ ಇದೀಗ ಪೋಲೀಸರ ತನಿಖೆಯಲ್ಲಿ ಬಯಲಾಗಿದೆ. ಯಾದಗಿರಿ ಮೂಲದ ಬಸವರಾಜು (28) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣ ಸಂಬಂಧ ಬಸವರಾಜು ಪತ್ನಿ ಶರಣಮ್ಮ(25), ಪ್ರಿಯಕರ ವೀರಭದ್ರ (19) ಮತ್ತು ಅನಿಲ್ ಎಂಬಾತನನ್ನು ಬಂಧಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದ ಬಸವರಾಜು, ಶರಣಮ್ಮ ದಂಪತಿ ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆರೋಪಿಗಳಲ್ಲಿ ಓರ್ವನಾದ ವೀರಭದ್ರ ತಂದೆ ಬಳಿ ಈ ದಂಪತಿ ಗಾರೆ ಕೆಲಸ ಮಾಡಿಕೊಂಡಿದ್ದು, ವೀರಭದ್ರ ಕೆಲಸಗಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ವೀರಭದ್ರ ಮತ್ತು ಶರಣಮ್ಮ ನಡುವೆ ಸಲುಗೆ ಬೆಳೆದಿದೆ. ಆ ಸಲುಗೆ ಅಕ್ರಮ ಸಂಬಂಧದ ವರೆಗೆ ಹೋಗಿದೆ.
ಹೀಗಾಗಿ ನ.19ರಂದು ಮದ್ಯ ಸೇವಿಸಿ ಬಸವರಾಜು ಮಲಗಿದ್ದ ವೇಳೆ ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ಶರಣಮ್ಮ ಕೊಲ್ಲಿಸಿದ್ದಾಳೆ. ತಲೆ ಮೇಲೆ ಕಲ್ಲು ಎತ್ತಿಹಾಕಿ, ನಂತರ ನೇಣು ಬಿಗಿದು ಬರ್ಬರವಾಗಿ ಬಸವರಾಜು ಕೊಲೆ ಮಾಡಲಾಗಿದೆ. ಬಳಿಕ ಶವವನ್ನ ಗಂಗೊಂಡಹಳ್ಳಿ ನಿರ್ಜನ ಪ್ರದೇಶಕ್ಕೆ ಆರೋಪಿಗಳು ಸಾಗಿಸಿದ್ದು, ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ. ಆ ಬಳಿಕ ಮನೆಯಲ್ಲಿ ಚೆಲ್ಲಿದ್ದ ನೆತ್ತರು ತೊಳೆದ ಶರಣಮ್ಮ, ನನ್ನ ಗಂಡ ಕಾಣೆಯಾಗಿದ್ದಾನೆ ಹುಡುಕಿಕೊಡಿ ಎಂದು ಬ್ಯಾಡರಹಳ್ಳಿ ಠಾಣೆ ಮೆಟ್ಟಿಲೇರಿದ್ದಳು.
ಆದರೆ ಅಷ್ಟರಲ್ಲಾಗಲೇ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಅಷ್ಟರಲ್ಲಾಗಲೇ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಬಸವರಾಜು ಕೊಲೆ ಬಳಿಕ ಬಿಳಿ ಬಣ್ಣದ ಕಾರ್ನಲ್ಲಿ ಆರೋಪಿಗಳು ಮೃತದೇಹ ಸಾಗಿಸಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇದೇ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ ಎನ್ನಲಾಗಿದೆ.








