ಬೆಂಗಳೂರು: ಬೆಂಗಳೂರಲ್ಲಿ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ.100ರಷ್ಟು ಮನ್ನಾ ಮಾಡುವ ಏಕಕಾಲಿಕ ತೀರುವಳಿ ಯೋಜನೆ(OTS)ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮೂರು ತಿಂಗಳ ಅವಧಿಗೆ ಏಕಕಾಲಿಕ ತೀರುವಳಿ ಯೋಜನೆ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ. 1965ರ ನಿಯಮಾವಳಿಗಳನ್ನು ಸಡಿಲಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ಪಾವತಿಸಲು ಬಾಕಿಯಿರುವ ನೀರಿನ ಬಿಲ್ಲಿನ ಸಂಬಂಧ ಏಕಕಾಲಿಕ ಸೆಟಲ್‌ಮೆಂಟ್ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ಮೊತ್ತಗಳನ್ನು ಲೆಕ್ಕ ಪತ್ರದಲ್ಲಿ ಸಮನ್ವಯಗೊಳಿಸಲು ಸಚಿವ ಸಂಪುಟ ನಿರ್ಣಯಿಸಲಾಗಿದೆ. ಫೆಬ್ರವರಿ 2025ರ ವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಬಾಕಿ ಮೊತ್ತವು ಒಟ್ಟು 701.71 ಕೋಟಿ ರೂ.ಗಳಿದ್ದು, ಈ ಮೊತ್ತದಲ್ಲಿ ಅಸಲು ಮೊತ್ತವು 439.03 ಕೋಟಿ ರೂ.ಗಳು ಹಾಗೂ ಬಾಕಿಯಿರುವ ಬಡ್ಡಿ ಮೊತ್ತವು 262.68 ಕೋಟಿ ರೂ.ಗಳಾಗಿದೆ. ಈ ಯೋಜನೆಗೆ 03 ತಿಂಗಳ ಕಾಲಮಿತಿ ನಿಗದಿಗೊಳಿಸಿ.
ಏಕಕಾಲಿಕ ಸೆಟಲ್‌ಮೆಂಟ್ ಯೋಜನೆ ಯನ್ನು ಕಾರ್ಯಗತಗೊಳಿಸಿದಲ್ಲಿ, ಗ್ರಾಹಕರಿಂದ ಬಾಕಿಯಿರುವ ನೀರಿನ ಅಸಲು ಬಿಲ್ಲಿನ ಮೊತ್ತವನ್ನು ಪಾವತಿಸಿಕೊಳ್ಳುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಬಹುದಾಗಿದ್ದು, ಸಾರ್ವಜನಿಕರಿಗೂ ಸಹ ಅಸಲು ಮೊತ್ತದ ಮೇಲಿನ ಬಡ್ಡಿ ಕಟ್ಟುವುದರಿಂದ ವಿನಾಯಿತಿ ದೊರಕಲಿದೆ.







