ಮೈಸೂರು : ಇತ್ತೀಚಿಗೆ ಮೈಸೂರಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಿತ್ತು. ಇದೀಗ ಇಂದು ಇಬ್ಬರು ರೈತರ ಮೇಲೆ ದಾಳಿ ಮಾಡಲು ಯತ್ನಿಸಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿ ಗುರುಪುರ ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಪ್ರದೇಶದಲ್ಲಿರುವ ಗೌಡನಕಟ್ಟೆ ಗ್ರಾಮದ ಜಮೀನಿನಲ್ಲಿ ಗುರುವಾರ ತಡರಾತ್ರಿ ಹುಲಿ ಸೆರೆ ಸಿಕ್ಕಿದೆ.
ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರಿಂದ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯು, ತಡರಾತ್ರಿ ತಾಯಿ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮರಿ ಹುಲಿಗಳಿಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರ ಮೇಲೆ ಹುಲಿ ದಾಳಿಗೆ ಯತ್ನಿಸಿತ್ತು. ಗೌಡನಕಟ್ಟೆಯ ರೈತ ಪ್ರಕಾಶ್ ಹಾಗೂ ಸ್ವಾಮಿ ಹುಲಿಯಿಂದ ಪಾರಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳಿಗೆ ರೈತರು ಹುಲಿ ಹಿಡಿಯಲೇಬೇಕೆಂದು ಒತ್ತಾಯಿಸಿ ಮುತ್ತಿಗೆ ಹಾಕಿದ್ದರು. ಅಲ್ಲದೇ ಗ್ರಾಮಸ್ಥರು ಸ್ಥಳದಲ್ಲೇ ಬೀಡು ಬಿಟ್ಟಿದ್ದರು.








