ಬಳ್ಳಾರಿ : ದೇಶದಲ್ಲಿ ಪೋಲಿಯೋ ರೋಗವು ಮರುಕಳಿಸಬಾರದು ಎಂಬ ಮುನ್ನೆಚ್ಚರಿಕೆಯೊಂದಿಗೆ ಐದು ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಪೋಲಿಯೊ ವೈರಸ್ ವಿರುದ್ಧ ರಕ್ಷಿಸಲು ಡಿ.21 ರಂದು ಬಳ್ಳಾರಿ ಸೇರಿದಂತೆ ರಾಜ್ಯಾಧ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು, ಕ್ಷೇತ್ರ ಮಟ್ಟದ ಮೇಲ್ವಿಚಾರಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹೆಚ್ಚಿನ ರೀತಿಯಲ್ಲಿ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
2011 ರ ಜ.13 ರಂದು ಭಾರತದಲ್ಲಿ ಪೋಲಿಯೋ ಕೊನೆಯ ಪ್ರಕರಣ ವರದಿಯಾದ ನಂತರ ಇಲ್ಲಿಯವರೆಗೆ ನಿರಂತರ ನಿಗಾವಣೆಯೊಂದಿಗೆ 5 ವರ್ಷದೊಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಸತತ 14 ವರ್ಷಗಳಿಂದ ಪ್ರಕರಣಗಳು ವರದಿಯಾಗಿರುವುದಿಲ್ಲ, ಇದನ್ನು ಉಳಿಸಿಕೊಳ್ಳಲು ಪ್ರತಿ ಮಗುವಿಗೂ ಲಸಿಕೆ ಹಾಕಿಸಬೇಕು ಎಂದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ವಸತಿ ಪ್ರದೇಶಗಳು, ವಲಸೆ ಪ್ರದೇಶಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಇಟ್ಟಿಗೆ ಬಟ್ಟಿ, ಕುರಿಗಾಯಿಗಳು ತಂಗಿರುವ ಸ್ಥಳಗಳು, ಕೊಳಚೆ ಪ್ರದೇಶಗಳು ತೋಟದ ಮನೆ, ದೊಡ್ಡಿ, ಹಟ್ಟಿ, ಕ್ಯಾಂಪ್‌ಗಳು, ನಗರಗಳಲ್ಲಿನ ಅಪಾರ್ಟ್ ಮೆಂಟ್ ಗಳು ಸೇರಿದಂತೆ ಮಕ್ಕಳ ಸಂಖ್ಯೆಯನ್ನು ಪಟ್ಟಿ ಮಾಡಿಟ್ಟುಕೊಂಡು ಈ ಹಿಂದೆ ಹಲವು ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಸಹ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ದ್ರಾವಣ ಹಾಕಿಸಲು ತಿಳಿಸಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಎಸ್.ಎಮ್.ಒ ಡಾ.ಶ್ರೀಧರ್ ಅವರು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಸವರಾಜ್, ಡಾ.ಅರುಣ್, ಡಾ.ಮಂಜುನಾಥ ಜವಳಿ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಡಿಎನ್‌ಒ ಗಿರೀಶ್, ಲಸಿಕಾ ಕ್ಷೇತ್ರದ ಮೇಲ್ವಿಚಾರಕರಾದ ಕಾಪ್ಸೆ.ಕೆ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು, ಕ್ಷೇತ್ರ ಮಟ್ಟದ ಮೇಲ್ವಿಚಾರಕರು ಹಾಜರಿದ್ದರು.
KSET ಪರೀಕ್ಷೆ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ: ಕ್ಲೇಮ್ ಪ್ರಕಾರ ದಾಖಲೆ ಇದ್ದರೆ ಮಾತ್ರ ಪ್ರಮಾಣ ಪತ್ರ
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








