ಚನ್ನರಾಯಪಟ್ಟಣ: ದಶಕಗಳ ಹೋರಾಟದ ಪರಿಣಾಮವಾಗಿ ಚನ್ನರಾಯಪಟ್ಟಣ ತಾಲೂಕು ಸುರಂಗ ಸಂತ್ರಸ್ತ ಹಳ್ಳಿಗಳಾದ ತಗಡೂರು-ಲಕ್ಕರಸನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದಿದ್ದು, ಸಣ್ಣ ಕೆರೆ ಮತ್ತು ದೊಡ್ಡ ಕೆರೆಗಳೆರಡು ಕೋಡಿಬಿದ್ದಿವೆ. ತುಂಬಿದ ಎರಡೂ ಕೆರೆಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಎರಡೂ ಗ್ರಾಮಸ್ಥರ ಜೊತೆಯಲ್ಲಿ ಬಾಗೀನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎನ್.ಬಾಲಕೃಷ್ಣ ಅವರು, ನಾನು ಜಿಪಂ ಸದಸ್ಯ ಆಗಿದ್ದ ಸಂದರ್ಭದಲ್ಲಿಯೂ ಬಾಗೂರು-ನವಿಲೆ ಹೋರಾಟ ನಡೆದಿತ್ತು. ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಅಂದು ನಡೆದ ಹೋರಾಟದ ಪರಿಣಾಮವಾಗಿ ಏತನೀರಾವರಿ ಯೋಜನೆಗಳು ರೂಪುಗೊಂಡವು. ಅದನ್ನು ಶಾಸಕನಾಗಿ ಅನುಷ್ಠಾನ ಮಾಡಿ ನೀರು ಹರಿಸಿದ ಹೆಗ್ಗಳಿಕೆ ನನ್ನ ಪಾಲಿನದ್ದು ಎಂದು ಹೇಳಿದರು.
ನವಿಲೆ ಏತನೀರಾವರಿ ಮೂಲಕ ತಗಡೂರು ಕೆರೆಗೆ ನೀರು ಹರಿಸಲು ಹಲವು ಅಡ್ಡಿ ಆತಂಕಗಳು ಎದುರಾದವು. ಅವುಗಳನ್ನು ನಿವಾರಿಸಿ ಸಮಸ್ಯೆ ಬಗೆಹರಿಸಲಾಯಿತು ಎಂದು ಹೇಳಿದರು.
ನಿಮ್ಮೂರಿನ ಪುತ್ರನಾದ ಶಿವಾನಂದ ತಗಡೂರು ಅವರು ವಿಧಾನ ಸೌಧದಲ್ಲಿ ನಮಗೊಂದು ಶಕ್ತಿಯಾಗಿದ್ದಾರೆ. ಕಲ್ಲೇಶ್ವರ ದೇವಸ್ಥಾನ ರಸ್ತೆಗೆ ಸರ್ಕಾರದಿಂದ ವಿಶೇಷ ಅನುದಾನ ಕೊಡಿಸಿ ಇಷ್ಟು ಚೆಂದ ರಸ್ತೆಯಾಗಲು ಕಾರಣರಾಗಿದ್ದಾರೆ ಎಂದರು.

ತಗಡೂರು ಗೇಟ್ ನಿಂದ ಹೆಗ್ಗಡಿಗೆರೆ ಗೇಟ್ ತನಕ ಮತ್ತು ಕೆರೆ ಹಿಂಭಾಗದಲ್ಲಿ ಹಾಯ್ದು ವಡ್ಡರಹಟ್ಟಿ ಸಂಪರ್ಕಿಸುವ ರಸ್ತೆ ಕಾಮಗಾರಿಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಒಂದು ಬಾರಿ ಅಧ್ಯಕ್ಷರಾಗುವುದು ಕಷ್ಟ. ರಾಜ್ಯ ಪತ್ರಕರ್ತರ ಸಂಘಕ್ಕೆ ಸತತವಾಗಿ ಮೂರನೇ ಬಾರಿಗೆ ಅವಿರೋಧವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ತಾಲೂಕಿಗೆ ಮತ್ತು ಜಿಲ್ಲೆಗೆ ಅಭಿಮಾನದ ಸಂಗತಿ. ಶೀಘ್ರದಲ್ಲೇ ತಾಲ್ಲೂಕು ಮಟ್ಟದಲ್ಲಿ ಶಿವಾನಂದ ಅವರಿಗೆ ನಾಗರೀಕ ಅಭಿನಂದನೆ ಹಮ್ಮಿಕೊಳ್ಳಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ತೊಂಬತ್ತರ ದಶಕದಲ್ಲಿ ಬಾಗೂರು-ನವಿಲೆ ಸುರಂಗ ಸಂತ್ರಸ್ತ ಹಳ್ಳಿಗಳಿಗೆ ನೀರಾವರಿ ಮತ್ತು ಪರಿಹಾರ ನೀಡಬೇಕೆಂದು ಹೋರಾಟ ನಡೆಸಲಾಗಿತ್ತು. ಈಗ ಕೆರೆಗಳಿಗೆ ನೀರು ಹರಿದಿರುವುದು ಸಂತಸ ತಂದಿದೆ. ತಗಡೂರು ಲಕ್ಕರಸನಹಳ್ಳಿ ಕೆರೆಗೆ ನೀರು ಬರಲು ಶ್ರಮಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ ಮತ್ತು ಶಿವಾನಂದ ತಗಡೂರು ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಕಲ್ಲೇಶ್ವರ ಸ್ವಾಮಿ ದೇವರಿಗೆ ರುದ್ರಾಭಿಷೇಕ ನಡೆಯಿತು. ತಗಡೂರು ಲಕ್ಕರಸನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.
ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ನಾಳೆ ಈ ಮಾರ್ಗದಲ್ಲಿ ಸಂಚಾರ ಬದಲಾವಣೆ | Bengaluru Traffic Update
ರಾಜ್ಯದ ಈ ಸುಪ್ರಸಿದ್ಧ ದೇವಾಲಯದಲ್ಲಿ ಇನ್ಮುಂದೆ ‘ಮದುವೆ’ಗಳು ನಿಷೇಧ ; ಕಾರಣವೇನು.?








