ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಲ್ಲಿ ತಳ್ಳುತ್ತಿದ್ದ ಯುವತಿ ಒಬ್ಬಳು ಕೆಳಗೆ ಬಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಒಂದು ಆಕೆ ಮೇಲೆ ಹರಿದು ಸಾವನ್ನಪ್ಪಿದ್ದಳು. ಇದೀಗ ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದ್ದು ರಸ್ತೆಗುಂಡಿ ತಪ್ಪಿಸಲು ಹೋಗಿ ಚಾಲಕನ ಸಮೇತ ಲಾರಿ ಎಂದು ಕೆರೆಗೆ ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ.
ಹೌದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಕೆರೆಯಲ್ಲಿ ಘಟನೆ ಸಂಭವಿಸಿದೆ. ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಕೆರೆಯಲ್ಲಿ ಮುಳುಗಿರುವ ಸಾಧ್ಯತೆಯಿದೆ. ಜಲ್ಲಿ ತುಂಬಿಕೊಂಡು ಬಂದಿದ್ದ 12 ಚಕ್ರದ ಲಾರಿ ಕಳೆದ ರಾತ್ರಿ 11:30ರ ಸುಮಾರಿಗೆ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ ಹೋಗುತ್ತಿದ್ದ ಲಾರಿ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಚಾಲಕನ ಸಮೇತವಾಗಿ ಕೆರೆಗೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್, ಅಗ್ನಿಶಾಮಕ ತಂಡ ಹಾಗೂ ಪೊಲೀಸರು ಆಗಮಿಸಿದ್ದು, ಕ್ರೇನ್ ಬಳಸಿ ಲಾರಿ ಮೇಲೆತ್ತಲು ಕಾರ್ಯಾಚರಣೆ ನಡೆಸಲಾಗುತ್ತಿದೆ.








