ಮೈಸೂರು : ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಂದ ಸಂಪ್ನಿಂದ ನೀರು ಮೇಲೆತ್ತಿಸಿ ಶೌಚಾಲಯ ಸ್ವಚ್ಛಗೊಳಿಸಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಶಿಕ್ಷಕರು ಶಾಲಾ ವಿದ್ಯಾರ್ಥಿಗಳಿಂದ ನೀರು ಎತ್ತಿಸಿ ಶೌಚಾಲಯ ಸ್ವಚ್ಛ ಮಾಡಿಸಿದ ಘಟನೆ ನಡೆದಿದೆ. ವರುಣಾದ ಬಿಳಿಗೆರೆಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಬಳಿ ಸಂಪ್ ನಿಂದ ನೀರು ಎತ್ತಿಸಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಗ್ರಾಮಸ್ಥ ಸಿದ್ದರಾಜು ಎಂಬುವವರು ಮಗಳನ್ನು ಅಂಗನವಾಡಿಗೆ ಬಿಡಲು ಹೋಗಿದ್ದಾಗ, ಶಾಲೆಯ ವಿದ್ಯಾರ್ಥಿಗಳು ಸಂಪ್ ನಿಂದ ನೀರು ಎತ್ತಿ ಶೌಚಾಲಯ ಶುಚಿಗೊಳಿಸುತ್ತಿದ್ದರು. ಈ ವೇಳೆ ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಬಿಇಒಗೆ ದೂರು ನೀಡಿದ್ದಾರೆ. ಈ ಬಗ್ಗೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗೆ ಮನವಿ ಮಾಡಲಾಗಿದೆ.








