ಬೆಂಗಳೂರು : ಕರ್ನಾಟಕ ಕಾಂಗ್ರೆಸ್ನಲ್ಲಿ ಇಷ್ಟು ದಿನ ಒಳಗೊಳಗೆ ಕುದಿಯುತ್ತಿದ್ದ ಅಧಿಕಾರ ಹಂಚಿಕೆಯ ಜ್ವಾಲಾಮುಖಿ ಸ್ಫೋಟಗೊಂಡಿದೆ. ಕಾಂಗ್ರೆಸ್ನ ದಿಗ್ಗಜ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ಕುರ್ಚಿ ಕಾಳಗಕ್ಕೆ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೈರಾಣಾಗಿದ್ದಾರೆ. ಸದ್ಯ ಕುರ್ಚಿ ಕಿತ್ತಾಟದ ಚೆಂಡು ರಾಹುಲ್ ಗಾಂಧಿ ಅಂಗಳಕ್ಕೆ ತಲಪುತ್ತಿದೆ.
ಹೌದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಎರಡೂ ಬಣಗಳ ನಾಯಕರು ದೆಹಲಿಗೆ ಪರೇಡ್ ನಡೆಸುತ್ತಿದ್ದಂತೆಯೇ ಖರ್ಗೆ ಎಚ್ಚೆತ್ತುಕೊಂಡಿದ್ದರು. ಸಮಸ್ಯೆ ಇತ್ಯರ್ಥಕ್ಕೆ ಬೆಂಗಳೂರಿಗೆ ಬಂದರು. ಆದರೆ, ಈ ಸಮಸ್ಯೆ ಎಐಸಿಸಿ ಅಧ್ಯಕ್ಷರ ವ್ಯಾಪ್ತಿಯನ್ನೂ ಮೀರಿದ ಬಿಕ್ಕಟ್ಟಿನಂತಾಗಿದೆ. ಇದೇ ಕಾರಣಕ್ಕೆ, ‘ನನ್ನ ಬಳಿ ಏನೂ ಇಲ್ಲ’ ಎಂದು ಖರ್ಗೆ ಹೈಕಮಾಂಡ್ ನಾಯಕರತ್ತ ಬೊಟ್ಟು ಮಾಡಿ ತೋರಿಸಿದ್ದಾರೆ.
ಪಕ್ಷದಲ್ಲಿ ಹೀಗೆ ಗೊಂದಲಗಳಾದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲವನ್ನ ಬಗಹರಿಸಿ. ಡಿಕೆ ಆಪ್ತರಿಂದ ಸಹಿ ಸಂಗ್ರಹ ಮಾಡ್ತಿದ್ದಾರೆ. ಇದೆಲ್ಲಾ ಪಕ್ಷಕ್ಕೆ ಒಳ್ಳೆಯದಲ್ಲ. ನೀವೇ ಸರಿಪಡಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವರ ದಂಡೇ ಅಹವಾಲು ಹೊತ್ತು ತರುತ್ತಿದೆ. ಸಚಿವರಾದ ಕೆಜೆ ಜಾರ್ಜ್, ಹೆಚ್.ಸಿ.ಮಹದೇವಪ್ಪ, ವೆಂಕಟೇಶ್ ಭಾನುವಾರ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಖರ್ಗೆ ಜೊತೆಗೆ ಮಾತುಕತೆ ಬಳಿಕ ಸಿಎಂ ಸಿದ್ದರಾಮಯ್ಯ ನಿವಾಸಕ್ಕೂ ಸಚಿವರು ಭೇಟಿ ನೀಡಿ ಸುದೀರ್ಘವಾಗಿ ಮಾತನಾಡಿದ್ದಾರೆ. ಆದರೆ, ಏನು ಮಾತನಾಡಿದ್ದರು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಮಂಗಳವಾರವೇ ದೆಹಲಿಗೆ ತೆರಳಲಿದ್ದಾರೆ. ರಾಹುಲ್ ಆಗಮಿಸಿದರೆ ಅವರಿಗೆ ಸಂಪೂರ್ಣ ವರದಿ ನೀಡಲು ಸಿದ್ಧರಾಗಿದ್ದಾರೆ. ಹೀಗಾಗಿ, ರಾಜ್ಯ ನಾಯಕರು ಕೂಡಾ ರಾಹುಲ್ ಗಾಂಧಿ ಅವರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎನ್ನುತ್ತಿದ್ದಾರೆ.








