ಬೆಂಗಳೂರು: ಯಕ್ಷಗಾನ ಕಲಾವಿದರಲ್ಲಿ ಕೆಲವರು ಸಲಿಂಗಕಾಮಿಗಳು ಎನ್ನುವಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದೇನು ಅಂತ ಮುಂದೆ ಓದಿ.
ಈ ಬಗ್ಗೆ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು, ಯಕ್ಷಗಾನ ಕಲಾವಿದರ ಸಂಕಟಗಳನ್ನು ಕುರಿತು ಮಂಡಿಸಿರುವ ವಿಚಾರಗಳಲ್ಲಿ ‘ಸಲಿಂಗಕಾಮ’ ಕುರಿತಾದ ಹೇಳಿಕೆಯೊಂದು ವಿವಾದವನ್ನು ಸೃಷ್ಟಿಸಿದೆ. ಪ್ರೊ.ಬಿಳಿಮಲೆಯವರು ತಮ್ಮ ಬಾಲ್ಯಕಾಲದಿಂದ ಮತ್ತು ಈಗಲೂ ಯಕ್ಷಗಾನದ ನಂಟನ್ನು ಉಳಿಸಿಕೊಂಡು ಬಂದಿದ್ದಾರೆ. ಪ್ರೊ.ಬಿಳಿಮಲೆ ಅವರು, ಯಕ್ಷಗಾನ ಕಲಾವಿದರ ಆತ್ಮಗೌರವ ಮತ್ತು ಸಾಮಾಜಿಕ ಘನತೆಯ ಸದಾಶಯ ಇರಿಸಿಕೊಂಡು ಆಡಿರುವ ಮಾತಿನ ಸಾಂದರ್ಭಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದ ಕೆಲವರು ವಿವಾದಕ್ಕೆ ಗುರಿಪಡಿಸಿರುವುದು ಆಶ್ಚರ್ಯದ ಸಂಗತಿ ಎಂದಿದ್ದಾರೆ.
ಪ್ರೊ.ಪುರುಷೋತ್ತಮ ಬಿಳಿಮಲೆಯವರು ಯಕ್ಷಗಾನದಲ್ಲಿ ಪಾತ್ರದಾರಿಯಾಗಿ ವೇಷ ಕಟ್ಟಿಕೊಂಡು ಕುಣಿದು, ಅರ್ಥದಾರಿಯಾಗಿ ವ್ಯಾಖ್ಯಾನ ಮಾಡುತ್ತಾ ಹಾಗೂ ಸಂಶೋಧಕನಾಗಿ ಯಕ್ಷಗಾನ ಕಲೆಯನ್ನು ಕುರಿತು ಬರೆಯುತ್ತಾ ರಂಗಭೂಮಿ ಮತ್ತು ಕಲಾವಿದರ ಬದುಕಿನ ಒಳಹೊರಗನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರು ಯಕ್ಷಗಾನದ ಎಲ್ಲಾ ಕಲಾವಿದರು ಸಲಿಂಗ ಕಾಮಿಗಳಾಗಿದ್ದಾರೆಂದು ಹೇಳಿರುವುದಿಲ್ಲ. ಇಪ್ಪತ್ತನೆಯ ಶತಮಾನದ ಅಂತ್ಯದ ಎಪ್ಪತ್ತು ಎಂಭತ್ತರ ದಶಕಗಳಲ್ಲಿ ಈಗಿನಷ್ಟು ಸಾರಿಗೆ ಸೌಕರ್ಯಗಳ ಅನುಕೂಲ ಇಲ್ಲದಾಗಿನ ದಿನಗಳಲ್ಲಿ ಯಕ್ಷಗಾನ ಕಲಾವಿದರು ಮೇಳಗಳನ್ನು ಕಟ್ಟಿಕೊಂಡು ದೀರ್ಘಕಾಲ ಊರೂರು ಅಲೆಯುತ್ತಿದ್ದಾಗಿನ ಬಿಕ್ಕಟ್ಟುಗಳನ್ನು ಕುರಿತು ಪ್ರೊ.ಬಿಳಿಮಲೆಯವರು ಪ್ರಸ್ತಾಪಿಸುತ್ತಾ ಲೈಂಗಿಕತೆ ಪೂರೈಸಿಕೊಳ್ಳುವ ಅಂಶವನ್ನು ಕುರಿತು ಮಾತಾಡಿದ್ದಾರೆ. ಇದು ನಿಜವಾಗಿಯೂ ಸೃಜನಶೀಲ ಸಾಂಸ್ಕೃತಿಕ ಪಠ್ಯಗಳಲ್ಲಿ ದಾಖಲಾಗಬೇಕಿರುವ ಪ್ರಮುಖ ಅಂಶವೇ ಆಗಿರುತ್ತದೆ.
ನನ್ನ ಕುಟುಂಬದ ಸದಸ್ಯರೆಲ್ಲರೂ ಮೂಲತಃ ಬಯಲುಸೀಮೆಯ ಮೂಡಲಪಾಯ ಯಕ್ಷಗಾನ- ಬಯಲಾಟದ ಕಲಾವಿದರಾಗಿದ್ದರು. ನನ್ನ ಬಾಲ್ಯದ ದಿನಗಳನ್ನು ನಾನು ಇಂತಹ ಬಯಲಾಟಗಳ ಹಿಮ್ಮೇಳದಲ್ಲಿ ಹಾಡುಗಳನ್ನು ಹಾಡುತ್ತಾ ಕಲಾವಿದರ ಬದುಕನ್ನು ಹತ್ತಿರದಿಂದ ಕಂಡವನಾಗಿದ್ದೇನೆ. ಆ ದಿನಗಳಲ್ಲಿ ಲಕ್ಷಣವಿರುವ ಗಂಡಸರೇ (ಬಹುಮಟ್ಟಿಗೆ ಯುವಕರು) ಮಹಿಳೆಯರ ಪಾತ್ರಗಳನ್ನು ಧರಿಸಿಕೊಂಡು ಕುಣಿಯುತ್ತಿದ್ದರು. ಅವರು ಆಂಗಿಕ ಚೇಷ್ಟೆ ಮತ್ತು ವೈಯಾರಗಳಿಂದ ಸಹಜವಾಗಿ ಪುರುಷರ ಆಕರ್ಷಣೆಗೆ ಒಳಗಾಗುತ್ತಿದ್ದರು. ಅಂಕದ ಪರದೆಯ ಹಿಂದೆ ಮಹಿಳಾ ಪಾತ್ರ ಧರಿಸಿದ್ದವರು ಮತ್ತು ಪುರುಷ ಪಾತ್ರದಾರಿಗಳು ಬೀಡಿ ಸೇದುತ್ತಾ ಅಥವಾ ಹೆಂಡದ ಬಾಟಲಿ ಹೀರುತ್ತಾ ಕುಣಿಯಲು ತಾಕತ್ತು ತುಂಬಿಕೊಳ್ಳುವುದನ್ನು ಬಾಲಕನಾಗಿದ್ದ ನಾನು ಗಮನಿಸುತ್ತಿದ್ದೆ. ಒಮ್ಮೆ ರಂಗಸ್ವಾಮಿ ಎಂಬುವವನು ರತ್ನಾಂಗಿ ಪಾತ್ರದ ವೇಷ ಕಟ್ಟಿಕೊಂಡು ಅಂಕದ ಪರದೆಯ ಹಿಂದೆ ಸೀರೆಯನ್ನು ಮೇಲಕ್ಕೆತ್ತಿಕೊಂಡು ಒಳಗಿನ ನಿಕ್ಕರ್ ಜೇಬಿಗೆ ಕೈತೂರಿಸಿಕೊಂಡು ಬೀಡಿ ಬೆಂಕಿಪಟ್ಣ ಹೊರ ತೆಗೆಯುತ್ತಿದ್ದ. ನಾರದ ನಾಗಣ್ಣ ಎಂಬ ಕಲಾವಿದನೊಬ್ಬ, “ನಿನ್ನ ಸೀರೆ ಲಾಡಿದಾರಕ್ಕೆ ಕಟ್ಟಿಕೊಂಡಿರುವ ಹೆಂಡದ ಬಾಟಲ್ ತೆಗಿ” ಎಂದು ರತ್ನಾಂಗಿಯ (ರಂಗಸ್ವಾಮಿ) ಸೀರೆಯೊಳಕ್ಕೆ ಕೈತೂರಿಸಿದ್ದ. ರಂಗಸ್ವಾಮಿಯ ಊದ್ದುಣ್ಣೆಯನ್ನೇ ಹೆಂಡದ ಬಾಟಲ್ ಎಂದು ತಿಳಿದು ಜಗ್ಗುತ್ತಿದ್ದ. ರಂಗಸ್ವಾಮಿ, “ಅದು ಬಾಟಲ್ ಅಲ್ಲ ಕಣೋ ಮಾಮ.. ನನ್ನ ಊದ್ದುಣ್ಣೆ” ಎಂದು ಹೇಳುತ್ತಿದ್ದ ದೃಶ್ಯವನ್ನು ನಾನು ನೋಡಿದ್ದ ನೆನಪು ಇವತ್ತು ನೋಡಿದೆನೇನೋ ಎಂಬಷ್ಟು ಹಸಿರಾಗಿ ನನ್ನ ನೆನಪಿನ ಕೋಶದಲ್ಲಿದೆ.
ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಕರಾವಳಿ ಸೀಮೆಯಲ್ಲಿ ಆಗಿನ ಕಾಲದ ಯಕ್ಷಗಾನದ ಕೆಲವು ಕಲಾವಿದರು ಪಡುತ್ತಿದ್ದ ಲೈಂಗಿಕ ಸಂಕಟಕ್ಕೆ ಕನ್ನಡಿ ಹಿಡಿದಿದ್ದಾರೆ. ನಮ್ಮೂರಿನಲ್ಲಿ ಯಕ್ಷಗಾನ ಬಯಲಾಟಗಳನ್ನು ರಂಗಮಂಚದ ಮೇಲೆ ತಂದು ರಂಜಿಸುತ್ತಿದ್ದವರು ದಲಿತ ಕಲಾವಿದರೇ ಆಗಿದ್ದರು. ಬಯಲಾಟ ನೋಡುತ್ತಿದ್ದ ಪ್ರಬಲ ಜಾತಿಗಳ ಕೆಲವು ಪಡ್ಡೆ ಹುಡುಗರು ಮತ್ತು ಗಂಡಸರು ಪ್ರೇಕ್ಷಕರ ನಡುವೆಯಿಂದ ಎದ್ದುಬಂದು ಸ್ತ್ರೀ ಪಾತ್ರದಾರಿಗಳ ಕೆನ್ನೆಗಳಿಗೆ ಚುಂಬಿಸಿ ಐದು- ಹತ್ತು ರೂಪಾಯಿ ನೋಟು ಕೊಟ್ಟು ಹೋಗುವುದು ವಾಡಿಕೆಯಲ್ಲಿತ್ತು. ‘ಉತ್ತಮ ಜಾತಿಗಳ ಕಲಾಪೋಷಕ ರಸಿಕ ಪ್ರೇಕ್ಷಕರು’ ಎಂದು ಹೊಗಳಿಸಿಕೊಂಡು ಬೀಗುವ ಅವಕಾಶ ಅವರದಾಗಿತ್ತು. ಮೇಲು ಕೀಳಿನ ಸಾಮಾಜಿಕ ವಿಭಜನೆಗಳಲ್ಲಿ ಸೀಳಿಕೊಂಡಿರುವ ನಮ್ಮ ಸಮಾಜದಲ್ಲಿ ಪ್ರಬಲ ಜಾತಿಗಳ ಪುರುಷ ಪ್ರೇಕ್ಷಕರು, ಮಹಿಳಾ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ದಲಿತ ಕಲಾವಿದರನ್ನು ನಡೆಸಿಕೊಳ್ಳುತ್ತಿದ್ದ ಈ ವರ್ತನೆ ಏನನ್ನು ತೋರಿಸುತ್ತದೆ ? ಇನ್ನು ನಮ್ಮೂರಿನಲ್ಲಿಯೇ ಮುಖ್ಯ ವಾಹಿನಿಯ ಸಮುದಾಯಗಳ ಪುರುಷರು ಅಭಿನಯಿಸುತ್ತಿದ್ದ ನಾಟಕಗಳಿಗೆ ಹೊರಗಿನಿಂದ ತಳಸ್ತರೀಯ ಮಹಿಳಾ ಕಲಾವಿದರನ್ನು ಕರೆಸಿಕೊಂಡು ವಿಪರೀತವಾಗಿ ಲೈಂಗಿಕ ಶೋಷಣೆಗೆ ಈಡುಮಾಡುತ್ತಿದ್ದ ಅನೇಕ ಸನ್ನಿವೇಶಗಳನ್ನು ನಾನು ಗಮನಿಸಿದ್ದೇನೆ. ಕೃಷ್ಣನ ಪಾತ್ರದಾರಿಯಾಗಿದ್ದ ಹೂವಾಡಿಗರ ಹುಲಿಯಪ್ಪ ಎಂಬುವವನು ತುಮಕೂರಿನ ಕೋತಿತೋಪಿನಿಂದ ರುಕ್ಮುಣಿ ಪಾತ್ರಕ್ಕೆ ಒಬ್ಬ ಪಡ್ಡೆಹೆಂಗಸನ್ನು ಕರೆಸಿಕೊಂಡು ಪ್ರತ್ಯೇಕ ಮನೆಯಲ್ಲಿ ಹಲವು ತಿಂಗಳುಗಳ ಕಾಲ ಇರಿಸಿಕೊಂಡಿದ್ದ. ಇಂತಹ ಅಂಶಗಳು ಕಲಾವಿದರ ಬದುಕಿನಲ್ಲಿ ಮತ್ತು ಒಟ್ಟಾರೆ ಸಮಾಜದಲ್ಲಿ ಬೀರುವ ಪರಿಣಾಮ ಏನೆಂಬುದನ್ನು ಸಂಶೋಧಕರು ಗಮನಿಸಬೇಕಿದೆ. ಪ್ರಬಲ ಜಾತಿಗಳ ಜನರ ಸಾಮಾಜಿಕ ಮೇಲರಿಮೆ ಮತ್ತು ವರ್ಗದ ಅಹಂಕಾರಗಳು ಹೀಗೆ ಲೈಂಗಿಕ ಪ್ರವೃತ್ತಿಗಳಲ್ಲಿಯೂ ವ್ಯಕ್ತವಾಗುತ್ತವೆ. ಇದು ಕೇವಲ ರಂಗಭೂಮಿಗೆ ಮಾತ್ರ ಸೀಮಿತವಾದ ಸಂಗತಿಯಲ್ಲ.
ಪ್ತೊ.ಪುರುಷೋತ್ತಮ ಬಿಳಿಮಲೆ ಅವರು ಎಪ್ಪತ್ತು ಎಂಭತ್ತರ ದಶಕಗಳ ಕಾಲದಲ್ಲಿ ಕೆಲವು ಯಕ್ಷಗಾನ ಕಲಾವಿದರು ಅನುಭವಿಸುತ್ತಿದ್ದ ಸಲಿಂಗಕಾಮವನ್ನು ಕುರಿತು ತಾವು ಕೇಳಿರುವ, ನೋಡಿರುವ, ಓದಿರುವ ಹಾಗೂ ಮಹಿಳಾ ವೇಷದಾರಿಗಳನ್ನು ಕಂಡು ಸ್ವಯಂ ಕ್ರಶ್ ಅನುಭವಿಸಿರುವ ಹಲವಾರು ಉದಾಹರಣೆಗಳ ಸಹಿತವಾಗಿ ಈ ಪ್ರಮುಖ ಪ್ರಶ್ನೆಯೊಂದನ್ನು ನಮ್ಮ ಮುಂದೆ ಮಂಡಿಸಿದ್ದಾರೆ. ಆ ಮೂಲಕ ಕಲಾವಿದರ ಬದುಕಿನ ಇಂತಹ ಮಗ್ಗುಲುಗಳನ್ನು ಅಧ್ಯಯನಕಾರರು ಗಮನಿಸಬೇಕೆಂದು ಬಯಸಿರುವುದು ತಪ್ಪೇನಲ್ಲ. ಇಂತಹ ಪ್ರಮುಖ ಪ್ರಶ್ನೆಯನ್ನು ವಿವಾದಗೊಳಿಸುವುದು ಒಳ್ಳೆಯದಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಯಾರು ಒಪ್ಪಿದರೂ ಒಪ್ಪದಿದ್ದರೂ ಸತ್ಯ ಅಳಿಸಲಾಗದು: ಬಿಳಿಮಲೆ ಪರ ಬ್ಯಾಟ್ ಬೀಸಿದ ದಿನೇಶ್ ಅಮೀನ್ ಮಟ್ಟು
ALERT : ಪೋಷಕರೇ ಎಚ್ಚರ : ಅತಿಯಾದ `ಮೊಬೈಲ್’ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!








