ಬೆಂಗಳೂರು : ನಾನು ಯಾವಾಗ್ಲು ರೇಸ್ ಅಲ್ಲಿ ಇರ್ತೀನಿ. 2013ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದಾಗ, ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆವು. ಆದರೆ ನಾನು ಸೋತೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ವಂಶಿಕೃಷ್ಣ ಅವರೊಂದಿಗೆ ಎಟಿಎಂ ಹಣ ದರೋಡೆ ಪ್ರಕರಣದ ತನಿಖೆಯ ಕುರಿತು ಚರ್ಚಿಸಿದರು. ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿರು.
ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಯ ವಿಚಾರಕ್ಕೆ ಸಂಬಂಧಪಟ್ಟಂತೆ, ನಾನು ಕೂಡ ಸಿಎಂ ಆಕಾಂಕ್ಷಿ ನನಗೂ ಸಿಎಂ ಆಗುವ ಆಸೆ ಇದೆ. ಆದರೆ ಈ ಸಂದರ್ಭ ಆ ರೀತಿ ಇಲ್ಲ ಸಿಎಂ ಬದಲಾವಣೆಯನ್ನು ವಿಚಾರ ಬಂದಾಗ ಆ ಕುರಿತು ವಿಚಾರ ಮಾಡೋಣ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ದಲಿತ ನಾಯಕರು ಸಿಎಂ ಆಗಬೇಕು ಎಂದು ಬಹಳ ದಿನದಿಂದ ಕೇಳುತ್ತಿದ್ದಾರೆ. ನಾವು ಊಟಕ್ಕೆ ಸೇರಿದ ತಕ್ಷಣ ಆಗಿಬಿಡುತ್ತದೆಯೇ?. ನಾವೆಲ್ಲ ಸಮಾನ ಮನಸ್ಕರಿದ್ದೇವೆ. ಒಳಮೀಸಲಾತಿ ಬಗ್ಗೆ ಹೋರಾಟ ಆಯ್ತು. ನಮ್ಮ ಸಮಸ್ಯೆಗಳ ಚರ್ಚೆ ಮಾಡಬಾರದೇ ಎಂದು ಅವರು ಮರುಪ್ರಶ್ನಿಸಿದರು.








