ಚಾಮರಾಜನಗರ : ಬೆಂಗಳೂರು ರಾಬರಿ ಪ್ರಕರಣ ತನಿಖೆ ನಡೆಯುವ ಹೊತ್ತಲ್ಲೇ, ರಾಜ್ಯದಲ್ಲಿ ಮತ್ತೊಂದು ದರೋಡೆ ನಡೆದಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಕೂಡ ರಾಬರಿ ಪ್ರಕರಣ ನಡೆದಿದೆ. ಕಾರನ್ನು ಫಾಲೋ ಮಾಡಿಕೊಂಡು ಬಂದ ಕೇರಳ ಗ್ಯಾಂಗ್ ಒಂದು ಸಿನಿಮಾ ಸ್ಟೈಲ್ ನಲ್ಲಿ ಬಂಡೀಪುರದ ಅರಣ್ಯದಲ್ಲಿ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಚಿನ್ನ ದರೋಡೆ ಮಾಡಿ ಹೋಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಿಂದ ಕೇರಳಕ್ಕೆ ಹಾದು ಹೋಗುವ ರಸ್ತೆಯಲ್ಲಿ ಈ ದರೋಡೆ ನಡೆದಿದೆ. ಮೂರು ಕಾರಿನಿಂದ ಬಂದ ದರೋಡೆ ಗ್ಯಾಂಗ್ ಬ್ರಿಜಾ ಕಾರಿನಲ್ಲಿ ಚಿನ್ನ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನ ಹಿಂಭಾಗ ಹಾಗೂ ಮುಂಭಾಗಕ್ಕೆ ಡಿಕ್ಕಿ ಹೊಡೆದು ಕಾರು ನಿಲ್ಲಿಸಿ ಕಾರಿನ ಸೀಟು ಹರಿದು 1.3 ಕೆಜಿ ತೂಕದ ಚಿನ್ನದ ಗಟ್ಟಿಯನ್ನು ಹೊತ್ತೊಯ್ದಿದ್ದಾರೆ.
ಕಾರಿನಲ್ಲಿದ್ದ ವಿನು ಹಾಗೂ ಸಮೀರ್ ಎಂಬ ಇಬ್ಬರಿಗೂ ಕೂಡ ಹಲ್ಲೆ ನಡೆಸಿ ಚಿನ್ನವನ್ನು ಹೊತ್ತು ಹೋಗಿದ್ದಾರೆ. ಅಲ್ಲದೇ ವಿನು ಹಾಗೂ ಕಾರು ಚಾಲಕ ಇಬ್ಬರನ್ನೂ ಕೂಡ ಕಾರಿನಲ್ಲಿ ಕಿಡ್ನಾಪ್ ಮಾಡಿ ಮೈಸೂರಿನ ವಿರಾಜಪೇಟೆ ರಸ್ತೆಯಲ್ಲಿ ಇಳಿಸಿ ಹೋಗಿದ್ದಾರೆ.
ಮಂಡ್ಯದಿಂದ ಚಿನ್ನ ತೆಗೆದುಕೊಂಡು ಕೇರಳಕ್ಕೆ ಹೋಗುತ್ತಿದ್ದರು.ಎರಡು ಇರಟಿಗಾ ಹಾಗೂ ಒಂದು ಇನ್ನೊವಾ ಕಾರಿನಲ್ಲಿ ಬಂದ 12 ಜನರ ಗುಂಪು ಪೂರ್ವ ನಿಯೋಜಿತ ಪ್ಲ್ಯಾನ್ ಮಾಡಿ ಬಂಡೀಪುರದ ಅರಣ್ಯದಲ್ಲಿ ಕಾರು ನಿಲ್ಲಿಸಿ ಚಿನ್ನವನ್ನು ಕದ್ದಿದ್ದಾರೆ.
ಯಾವ ಸ್ಥಳದಲ್ಲಿ, ಯಾವ ವೇಳೆ ದರೋಡೆ ಮಾಡಬೇಕು ಎಂದು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದರು. ಅಲ್ಲದೇ ಎರಡು ವರ್ಷದ ಹಿಂದೆ ಕೂಡ ಗುಂಡ್ಲುಪೇಟೆ ಭಾಗದಲ್ಲಿ ಇದೇ ರೀತಿಯ ದರೋಡೆ ನಡೆದಿತ್ತು.ಕೇರಳಕ್ಕೆ ಚಿನ್ನದ ಗಟ್ಟಿಯನ್ನು ಕೊಂಡೊಯ್ಯುತ್ತಿದ್ದ ವ್ಯಕ್ತಿಯ ಕಾರನ್ನು ಯಾರೂ ಇಲ್ಲದ ವೇಳೆ ಬಂಡೀಪುರದ ಕಾಡಿನ ರಸ್ತೆಯಲ್ಲಿ ದರೋಡೆ ಮಾಡಿದ್ದು,ಪ್ರಯಾಣಿಕರಲ್ಲಿ ಭಯ ಸೃಷ್ಟಿಸಿದೆ. ಅಲ್ಲದೇ ಈ ಪ್ರಕರಣ ಪತ್ತೆಗೆ 5 ತಂಡ ಕೂಡ ರಚಿಸಲಾಗಿದೆ. ಎಲ್ಲಾ ಕಡೆಯೂ ಕೂಡ ಸಿಸಿಟಿವಿ ಪರಿಶೀಲನೆ ಮಾಡಲಾಗ್ತಿದೆ.








