ಬೆಂಗಳೂರು: “ವೃತ್ತಿ ಯಾವುದೇ ಇರಲಿ. ಮೇಲು- ಕೀಳು ಎಂಬ ಮನೋಭಾವ ಬಿಟ್ಟುಬಿಡಿ. ಪ್ರಾಮಾಣಿಕತೆ, ನೈತಿಕೆ ಉಳಿಸಿಕೊಂಡಲ್ಲಿ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುಧೆ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಆಯೋಜಿಸಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಸಾರ್ವತ್ರಿಕ ಮಾನವೀಯ ಮೌಲ್ಯ’ ವಿಷಯ ಕುರಿತು ಮಾತನಾಡಿದ ಅವರು, “ವೃತ್ತಿಯಲ್ಲಿ ಮೇಲು- ಕೀಳು ಎಂಬುದು ಇಲ್ಲ. ವೃತ್ತಿಯಾವುದೇ ಇರಲಿ ಅದಕ್ಕೆ ಗೌರವ ನೀಡುವುದನ್ನು ನೀವು ಕಲಿಯಬೇಕು. ಅದು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿದೆ ಎಂದರು.
ವಿದ್ಯಾರ್ಥಿಗಳು ಘಟಿಕೋತ್ಸವದ ವೇಳೆ ಸತ್ಯದಿಂದ ನಡೆಯುತ್ತೇನೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತೀರಿ, ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಹೋಗಬೇಕು. ಅಲ್ಲದೆ, ನೀವು ಜೀವನದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ ಗೆ ನಿಮ್ಮ ಕಲಿಕೆ ಮುಗಿಯಿತು ಎಂದು ಭಾವಿಸುವುದು ತಪ್ಪು. ಕಲಿಕೆ ಎಂಬುದು ಜೀವನದಲ್ಲಿ ನಿರಂತರ. ಶಿಕ್ಷಕರು ಸಹ ಪ್ರತಿನಿತ್ಯ ಅಪ್ಡೇಟ್ ಆಗಬೇಕು. ಏಕೆಂದರೆ, ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ಕಾಲಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕಾದಲ್ಲಿ ಶಿಕ್ಷಕರು ಸಹ ಅಪ್ಡೇಟ್ ಆಗಬೇಕು” ಎಂದು ಸಲಹೆ ನೀಡಿದರು.
“ನಾವು ಪ್ರಕೃತಿಗೆ ವಿರುದ್ಧವಾಗಿ ನಡೆಯಬಾರದು. ಉಚಿತವಾಗಿ ಬೆಳಕು, ನೀರು, ಗಾಳಿ ಸಿಗುತ್ತಿದೆ. ನಾವು ಪ್ರತಿಯಾಗಿ ಪ್ರಕೃತಿಗೆ ಏನು ನೀಡುತ್ತಿದ್ದೇವೆ.? ಹೀಗಾಗಿ ಕನಿಷ್ಠ ಕೊಡುಗೆ ನೀಡದೆ, ಇದ್ದರೂ, ಅದನ್ನು ಮಾಲಿನ್ಯ ಮಾಡಬಾರದು. ಸುಸ್ಥಿರ ಅಭಿವೃದ್ಧಿಗೆ ನಾವು ಕೈಜೋಡಿಸಬೇಕು” ಎಂದರು.
ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಡಾ.ಎಚ್.ಆರ್.ಸುದರ್ಶನ ರೆಡ್ಡಿ ಮಾತನಾಡಿ, “ನಾವು ಈ ಯೂನಿರ್ವಸಲ್ ಹ್ಯೂಮನ್ ವ್ಯಾಲ್ಯೂ(ವಿಎಚ್‌ವಿ) ಸೆಲ್‌ವತಿಯಿಂದ ನಾವು 2023ರಿಂದ ಮಾಸಿಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ವಿಶ್ರಾಂತ ಕುಲಪತಿ, ಎಐಸಿಟಿಇ ಅಧ್ಯಕ್ಷರು, ಶಿಕ್ಷಣ ತಜ್ಞರು ಸೇರಿದಂತೆ ಸಾಕಷ್ಟು ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಲ್ಪಿಸಿಕೊಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಬೇಕೆಂಬುದು ನಮ್ಮ ಗುರಿ” ಎಂದರು.
ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವ ಡಾ.ಪ್ರಸಾದ್ ಬಿ.ರಾಮ್‌ಪುರೆ, ಕುಲಸಚಿವ(ಮೌಲ್ಯಮಾಪನ) ಡಾ.ಯು.ಜಿ.ಉಜ್ವಲ್, ವಿತ್ತಾಧಿಕಾರಿ ಡಾ.ಪ್ರಶಾಂತ್ ನಾಯಕ ಇತರರು ಇದ್ದರು.








