ಶಿವಮೊಗ್ಗ : ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದಂತ ಜಿ.ನಾಗೇಶ್ ಅವರಿಗೆ ಶ್ರೀ ಮುರುಘರಾಜೇಂದ್ರ ಸಂಸ್ಥಾನ ಮಠದಿಂದ ಸಮಾಜಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಮುರುಘಾಮಠದಲ್ಲಿ ಗುರುವಾರ ಶ್ರೀ ಮುರುಘರಾಜೇಂದ್ರ ಸಂಸ್ಥಾನ ಮಠದ ವತಿಯಿಂದ ಏರ್ಪಡಿಸಿದ್ದ ಕಂಚಿನ ರಥ ಕಾರ್ತಿಕ ರಥ ದೀಪೋತ್ಸವ ಮತ್ತು ಭಾವೈಕ್ಯ ಸಮ್ಮೇಳನದಲ್ಲಿ ಕೆಯುಡಬ್ಲ್ಯೂಜೆ ನಿಕಟಪೂರ್ವ ಅಧ್ಯಕ್ಷ, ಸಾಗರ ಸುತ್ತ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಜಿ.ನಾಗೇಶ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಣಂದೂರು ಲಿಂಗಪ್ಪ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು, ಕುಂದುಗೋಳು ಮಠದ ಶ್ರೀ ಅಭಿನವ ಬಸವಣಜ್ಜ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಡಾ. ಶಾಲಿನಿ ನಾಲ್ವಾಡ್, ಸಂಧ್ಯಾ ಶೆಣೈ, ಡಾ. ಅರ್.ಸಿ.ಜಗದೀಶ್, ಸ್ವಾಮಿರಾವ್, ಬಿ.ಟಾಕಪ್ಪ, ವಿ.ಟಿ.ಸ್ವಾಮಿ, ವಿವಿಧ ಮಠಾಧೀಶರು ಹಾಜರಿದ್ದರು.








