ಮಂಡ್ಯ : ಅಯ್ಯಪ್ಪ ಮಾಲಾದಾರಿಗಳ ಮಿನಿ ಬಸ್ ಹಾಗೂ ಗ್ಯಾಸ್ ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಚಾಲಕ ಹಾಗೂ ಇಬ್ಬರು ಮಾಲಾದಾರಿಗಳು ಗಾಯಗೊಂಡಿರುವ ಘಟನೆ ಮದ್ದೂರು ನಗರದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎಲಿವೇಟೆಡ್ ರಸ್ತೆಯಲ್ಲಿ ಗುರುವಾರ ಸಂಜೆ ಜರುಗಿದೆ.
ಬೆಂಗಳೂರಿನ ಕುಂಬಳಗೂಡುವಿನಿಂದ 22 ಮಂದಿ ಖಾಸಗಿ ಮಿನಿ ಬಸ್ ನಲ್ಲಿ ಶಬರಿಮಲೆ ಅಯ್ಯಪ್ಪ ಯಾತ್ರೆಗೆ ತೆರಳುತ್ತಿದ್ದಾಗ ಮದ್ದೂರು ನಗರದ ಕೊಲ್ಲಿ ವೃತ್ತದ ಮೇಲ್ಬಾಗದ ಎಲಿವೇಟೆಡ್ ರಸ್ತೆಯಲ್ಲಿ ಬಸ್ ಪಂಚರ್ ಆಗಿದೆ.
ಬಸ್ ನ ಟೈರ್ ಅನ್ನು ಬದಲಾಯಿಸಲು ಚಾಲಕನಿಗೆ ಇಬ್ಬರು ಮಾಲಾದಾರಿಗಳು ಸಹಾಯ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದ ಗ್ಯಾಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಮತ್ತು ಇಬ್ಬರು ಮಾಲಾದಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಉಳಿದವರು ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮದ್ದೂರು ಸಂಚಾರ ಪೊಲೀಸರು ವಾಹನ ಸವಾರರ ಸಹಾಯದಿಂದ ಮೂವರು ಗಾಯಾಳುಗಳಿಗೆ ಮದ್ದೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎಲಿವೇಟೆಡ್ ರಸ್ತೆಯಲ್ಲಿ ಒಂದು ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸಂಚಾರ ಪೊಲೀಸರು ಅಪಘಾತದ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸುಮಾರು 3 ಗಂಟೆಯ ಬಳಿಕ ಅಯ್ಯಪ್ಪ ಮಾಲಾದಾರಿಗಳು ಮತ್ತೋಂದು ಬಸ್ ಮೂಲಕ ಯಾತ್ರೆಗೆ ತೆರಳಿದರು.
ಸ್ಥಳಕ್ಕೆ ಮದ್ದೂರು ವೃತ್ತ ನಿರೀಕ್ಷಕ ನವೀನ್, ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಮಲಾಕ್ಷಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
BREAKING ;’IBPS ಕ್ಲರ್ಕ್ ಪ್ರಿಲಿಮ್ಸ್’ ಫಲಿತಾಂಶ ಬಿಡುಗಡೆ ; ಈ ರೀತಿ ಸ್ಕೋರ್ಕಾರ್ಡ್ ಡೌನ್ಲೋಡ್ ಮಾಡಿ!








