ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 3ರಷ್ಟು ಮೀಸಲಾತಿ ಕಲ್ಪಿಸಿದ್ದು, ಈವರೆಗೆ 180 ಜನ ಮೀಸಲಾತಿಯನ್ನು ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಬೆಂಗಳೂರಿನ ಆಡುಗೋಡಿ ಸಿಎಆರ್ ಕವಾಯತು ಮೈದಾನದಲ್ಲಿ ಇಂದು ನಡೆದ ‘ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕ್ರೀಡಾ ಮೀಸಲಾತಿಯ ಸದ್ಬಳಕೆ ಮಾಡಿಕೊಂಡು 180 ಜನ ಪಿಎಸ್‌ಐ, ಪೇದೆ ಹುದ್ದೆಗಳಿಗೆ ನೇಮಕಾತಿ ಹೊಂದಿದ್ದಾರೆ. ಅದೇರೀತಿ, ಪೊಲೀಸ್ ಕುಟುಂಬದಿಂದ ಬಂದ ಮಕ್ಕಳಿಗೆ ಸಿಇಟಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಕ್ರೀಡೆ ದೈಹಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿಯೂ ನಮ್ಮನ್ನು ಹೆಚ್ಚು ಸದೃಡಗೊಳಿಸುತ್ತದೆ. ನಮ್ಮ ಜೀವನದ ಅನೇಕ ಸಂದರ್ಭಗಳಲ್ಲಿ ಸೋಲು-ಗೆಲುವುಗಳ ಅನುಭವಗಳು ಎದುರಾಗುತ್ತವೆ. ಸೋತಾಗ ನಿರಾಶೆಯಾಗುತ್ತದೆ. ಕ್ರೀಡೆಗಳು ಆತ್ಮಸ್ಥೈರ್ಯ ಹೆಚ್ಚಿಸುತ್ತದೆ.
ಕರ್ನಾಟಕ ಪೊಲೀಸ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಸದನದ ಒಳಗಡೆ ಮತ್ತು ಹೊರಗಡೆ ಹೇಳಿದ್ದೇನೆ. ಅರೋಪಿಗಳನ್ನು ಹಿಡಿಯುವುದರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮುಂಚೂಣಿಯಲ್ಲಿದೆ. ಯಾವುದೇ ರೀತಿಯ ಘಟನೆಗಳು ನಡೆದಾಗ ಸ್ವಾಭಾವಿಕವಾಗಿ ಟೀಕೆಗಳು ಬರುತ್ತವೆ. ಟೀಕೆಗಳು ನಮಗೆ ಶಕ್ತಿಯನ್ನು ಕೊಡುತ್ತವೆ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ, ಹೆಚ್ಚಿನ ಕೆಲಸದ ಮೂಲಕ ನಮ್ಮ ಸಾಮರ್ಥ್ಯವನ್ನು ತೋರಿಸಬೇಕು ಎಂದು ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರು ಉಪಸ್ಥಿತರಿದ್ದರು.
BREAKING ;’IBPS ಕ್ಲರ್ಕ್ ಪ್ರಿಲಿಮ್ಸ್’ ಫಲಿತಾಂಶ ಬಿಡುಗಡೆ ; ಈ ರೀತಿ ಸ್ಕೋರ್ಕಾರ್ಡ್ ಡೌನ್ಲೋಡ್ ಮಾಡಿ!








