ಬೆಂಗಳೂರು: ನಗರದ ಬಸವನಗುಡಿಯ ಕಡಲೆಕಾಯಿ ಪರಿಷೆ’ ಈ ವರ್ಷ ಅಭೂತಪೂರ್ವ ಯಶಸ್ಸು ದಾಖಲಿಸಿದೆ. ಮೂರು ದಿನಗಳಲ್ಲಿಯೇ 6 ಲಕ್ಷ ಜನ ಭಾಗವಹಿಸಿದ್ದು, ಪರಿಷೆ ಮುಕ್ತಾಯವಾಗುವುದರೊಳಗೆ 12 ಲಕ್ಷಕ್ಕೂ ಮೀರಿ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾದ ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಯು ಈ ವರ್ಷ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಬಸವನಗುಡಿಯ ಸುತ್ತಮುತ್ತಲಿನ ರಸ್ತೆಗಳು ಜನಜಾತ್ರೆಯಿಂದ ಸಂಭ್ರಮದಲ್ಲಿ ಮುಳುಗಿ ಹೋಗಿದೆ ಎಂದರೆ ತಪ್ಪಾಗಲಾರದು. ಮೂರು ದಿನಗಳಲ್ಲಿ ಅರು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಮುಜರಾಯಿ ಇಲಾಖೆಯು ಈ ವರ್ಷ ಅಧಿಕೃತವಾಗಿಯೇ ಐದು ದಿನಗಳ ಕಾಲಕ್ಕೆ ಪರಿಷೆಯನ್ನು ವಿಸ್ತರಿಸಿ ಅಚ್ಚುಕಟ್ಟಾಗಿ ಆಯೋಜಿಸಿದೆ. ಸೋಮವಾರ ಪರಿಷೆ ಆರಂಭವಾಗಿದ್ದರೂ, ಶನಿವಾರದಿಂದಲೇ ಜಾತ್ರೆ ಸಡಗರ ಆರಂಭವಾಗಿತ್ತು. ಶುಕ್ರವಾರಕ್ಕೆ ಮುಗಿದರೂ ವಾರಾಂತ್ಯವಿರುವುದರಿಂದ ಭಾನುವಾರದವರೆಗೂ ಜನಸಂದಣಿ ಇರಲಿದೆ ಎಂದು ಪೊಲೀಸ್ ಇಲಾಖೆ ಅಂದಾಜಿಸಿದೆ ಎಂದು ತಿಳಿಸಿದ್ದಾರೆ.
ಕಡಲಕಾಯಿ ಪರಿಷೆಯಲ್ಲಿ ಇದೇ ಮೊದಲನೇ ಬಾರಿಗೆ ವಿಶೇಷ ದೀಪಾಲಂಕಾರ ಮತ್ತು ದೇವಸ್ಥಾನ ಮತ್ತು ಆವರಣದಲ್ಲಿ ಹೂವಿನ ವಿಶೇಷ ಅಲಂಕಾರ ವ್ಯವಸ್ಥೆ ಮಾಡಲಾಗಿದೆ. ಬಸವ ಗುಡಿ, ಗಾಂಧಿ ಬಜಾರ್, ಆರ್ ವಿ ರಸ್ತೆ, ನೆಟ್ಟ್ಕಲ್ಲಪ್ಪ ಸರ್ಕಲ್, ಎನ್ ಆರ್ ರಸ್ತೆಯಲ್ಲಿ ವಿಶೇಷ ದೀಪಾಲಂಕಾರ ಹಾಗೂ ದೇವಸ್ಥಾನ ಮತ್ತು ಆವರಣದಲ್ಲಿ ವೈಶಿಷ್ಟ್ಯಪೂರ್ಣ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿವೆ ಎಂದಿದ್ದಾರೆ.
ಬೆಂಗಳೂರಿನ ಜನರಿಗೆ ಜಾತ್ರೆಯ ಸೊಬಗು ನೀಡಿದ ಕಡಲೆ ಕಾಯಿ ಪರಿಷೆ
ದೊಡ್ಡ ಬಸವಣ್ಣನೊಂದಿಗೆ ದೊಡ್ಡ ಗಣಪತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು, ನಂತರ ಕಡಲೆಕಾಯಿ ಖರೀದಿಸಿದರು. ದಿನಾಂಕ : 17-11-2025 ಸೋಮವಾರದಿಂದ ಅಧಿಕೃತವಾಗಿ ಪರಿಷೆ ಪ್ರಾರಂಭವಾಗಿದ್ದರೂ ಸಹ ಶನಿವಾರದಿಂದಲೇ ವ್ಯಾಪಾಸ್ಥರು, ಜನರು ಜಮಾಯಿಸಿದ್ದರು. ಜನರು ಪರಿಷೆಗೆ ಬಂದು ಕಡಲೆಕಾಯಿ ಖರೀదిಸಿ, ಸಂಜೆಯ ವೇಳೆಯಲ್ಲಿ ಕಾಲಿಡಲೂ ಸಾಧ್ಯವಿಲ್ಲದಷ್ಟು ಜನರಾಶಿ ಬಸವನಗುಡಿ ಮುಖ್ಯ ರಸ್ತೆಯಲ್ಲಿ ಕಂಡುಬಂದಿತ್ತು.
ಪರಿಷೆಯಲ್ಲಿ ಈ ಬಾರಿ 4,500ಕ್ಕೂ ಮಳಿಗೆಗಳಿದ್ದು, ಪ್ರತಿದಿನವೂ ಬಿಬಿಎಂಪಿ ವತಿಯಿಂದ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಬೆಂಗಳೂರು ನಗರದ ನಿವಾಸಿಗಳಲ್ಲದೆ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜನರು ಹೆಚ್ಚಾಗಿ ಬರುತ್ತಿದ್ದಾರೆ.
ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಪ್ರತಿದಿನವೂ ಬಸವನಗುಡಿ ಪ್ರದೇಶಕ್ಕೆ ಭೇಟಿ ನೀಡಿ, ವ್ಯವಸ್ಥೆಗಳ ಮೇಲೆ ಖುದ್ದು ನಿಗಾವಹಿಸುತ್ತಿದ್ದಾರೆ. ಪರಿಷೆ ನಡೆಯುತ್ತಿರುವ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಗೆ ಆದ್ಯತೆ ನೀಡಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ರಸ್ತೆಯ ಎರಡೂ ಬದಿಯ ಜೊತೆಗೆ ಮಧ್ಯಭಾಗದಲ್ಲೂ ಕಡಲೆಕಾಯಿಯನ್ನು ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ. ಹಸಿ, ಒಣ ಬೇಯಿಸಿದ, ಹುರಿದ ಕಡಲೆಕಾಯಿ , ಹತ್ತು ಹಲವು ಬಗೆಯ ಕಡಲೆಕಾಯಿಯ ಆಕರ್ಷಣೆಯ ಜತೆಗೆ ಬೇಲ್, ಬಜ್ಜಿ, ಮಸಾಲ ಹಪ್ಪಳ, ಅಲೂ ಟ್ವಿಸ್ಟರ್ ಸೇರಿದಂತೆ ವಿವಿಧ ಭಕ್ಷ್ಯಗಳು, ಆಟಿಕೆ ಆಕರ್ಷಿಸುತ್ತಿವೆ. ಜಗಮಗಿಸುವ ಬೆಳಕಿನಲ್ಲಿ ಆಟದ ಮೋಜು ಕೂಡಾ ಇದೆ.
ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ಕಡಲೆಕಾಯಿ ಖರೀದಿಸಿ ಕೊಂಡೊಯ್ಯಲು ಹಲವು ಮಂದಿ ಬಟ್ಟೆಯ ಚೀಲಗಳನ್ನು ತಂದಿದ್ದು, ಪರಿಸರ ಸ್ನೇಹಿ ಪರಿಷೆಗೆ ಸಾಕ್ಷಿಯಾಗಿದೆ.
ಬಸವನಗುಡಿಯ ಪರಿಷೆಯಲ್ಲಿ ಕಡಲೆಕಾಯಿ ಮಾರಾಟದ ವಹಿವಾಟು ಒಂದು ಕೋಟಿಗೂ ಹೆಚ್ಚಾಗಿದೆ ಎನ್ನಲಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಮಳಿಗೆಗಳಿದ್ದು, ವ್ಯಾಪಾರವೂ ಚೆನ್ನಾಗಿ ಆಗಿದೆ. ಮಳಿಗೆಗೆ ಶುಲ್ಕ ವಿನಾಯಿತಿ ನೀಡಿರುವುದರಿಂದ ವ್ಯಾಪಾರಿಗಳು ಸಂತಸದಿಂದ , ಕಳೆದ ಶುಕ್ರವಾರದಿಂದಲೇ ಸಾಕಷ್ಟು ಮಂದಿ ಮಳಿಗೆ ಪ್ರಾರಂಭಿಸಿ ವ್ಯಾಪಾರ ಮಾಡುತ್ತಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದಿಂದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. *ಒಟ್ಟಾರೆ ಈ ವರುಷ ಜರುಗುತ್ತಿರುವ ಕಡಲೆಕಾಯಿ ಪರಿಷೆಯು ಹಲವು ವೈಶಿಷ್ಟ್ಯಗಳಿಂದ ಜನಮನ ಸೆಳೆಯುತ್ತಿದೆ.
BREAKING : ರಾಜ್ಯ ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ
ALERT : ಈ `ಪಾಸ್ ವರ್ಡ್’ಗಳನ್ನು ಬಳಸಿದ್ರೆ ನಿಮ್ಮ `ಡೇಟಾ ಲೀಕ್’ ಆಗಬಹುದು ಎಚ್ಚರ.!








