ಚಿತ್ರದುರ್ಗ : ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮುರುಘಾ ಶ್ರೀ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ಕೋರ್ಟ್ ನ.26ಕ್ಕೆ ಆದೇಶ ಕಾಯ್ದಿರಿಸಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ನಜ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪ್ರಕರಣದ ವಾದ-ಪ್ರತಿವಾದವು ಪೂರ್ಣಗೊಂಡಿದೆ. ಇದೇ ನವೆಂಬರ್ 26ರಂದು ಮಹತ್ವದ ತೀರ್ಪು ಪ್ರಕಟಿಸಲು ದಿನಾಂಕ ನಿಗದಿಪಡಿಸಿ ಇಲ್ಲಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಹೆಚ್ ಆರ್ ಜಗದೀಶ್ ಹೇಳಿದ್ದಾರೆ.
ಶರಣರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸಂಬಂಧ ಸುದೀರ್ಘ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಸಂತ್ರಸ್ತೆಯ ಪರ ಅಂತಿಮ ವಾದ ಮಂಡಿಸಲಾಗಿದ್ದು, ವಾದ ಆಲಿಸಿದ ನ್ಯಾಯಾಲಯ ನ.26ಕ್ಕೆ ಪ್ರಕರಣದ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದೆ.







