ಬೆಂಗಳೂರು : ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್ ಠಾಣೆಯ ಅಧಿಕಾರಿಯಾಗಿದ್ದರೂ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿಯ ಕೋಳೂರು ಗ್ರಾಮದ ವಿ.ವಿವೇಕಾನಂದ (25) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಸಂಡೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಬೇಕು ಬಳ್ಳಾರಿ ಜಿಲ್ಲಾ ಎಸ್‌ಪಿಗೆ ಆದೇಶಿಸಿದೆ.
ಆರೋಪಿ ಯಾರೇ ಆಗಿದ್ದರೂ ಆತ ಅಪರಾಧ ಎಸಗಿದ್ದರೆ ತನಿಖೆ ನಡೆಸಲೇಬೇಕು. ಪ್ರಕರಣದಲ್ಲಿ ದೂರು ದಾಖಲಿಸದೆ ಇರುವುದು ಸಂಪೂರ್ಣ ಕಾನೂನು ಬಾಹಿರ. ಅಗತ್ಯ ಎನಿಸಿದರೆ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಬೇರೆ ಪೊಲೀಸ್ ಠಾಣೆಗೆ ಆದೇಶಿಸಬಹುದು. ಆ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲ್ವಿಚಾರಣೆಯಲ್ಲೇ ನಡೆಸಬೇಕು ಎಂದು ಕೋರ್ಟ್ ಹೇಳಿದೆ.








