ಬೆಂಗಳೂರು : ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಹೊಸ ವರ್ಷಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಪಡಿತರ ಚೀಟಿಗೆ ‘ಇಂದಿರಾ’ ಆಹಾರ ಕಿಟ್ ವಿತರಣೆ ಯೋಜನೆಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಂತೆ ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಕಿಟ್‌ನಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು. ಒಬ್ಬರು ಅಥವಾ ಇಬ್ಬರು ಸದಸ್ಯರಿದ್ದರೆ ಕಿಟ್‌ನಲ್ಲಿ 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ, ತಲಾ ಅರ್ಧ ಕಿಲೋ ಸಕ್ಕರೆ ಮತ್ತು ಉಪ್ಪು, ಮೂವರು ಅಥವಾ ನಾಲ್ವರು ಸದಸ್ಯರಿದ್ದರೆ ಒಂದೂವರೆ ಕಿಲೋ ಗ್ರಾಂ ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ತಲಾ ಒಂದು ಕಿಲೋ ಸಕ್ಕರೆ ಮತ್ತು ಉಪ್ಪು, ಐವರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 2,250 ಗ್ರಾಂ ತೊಗರಿ ಬೇಳೆ, ಒಂದೂವರೆ ಲೀಟರ್ ಅಡುಗೆ ಎಣ್ಣೆ, ತಲಾ ಒಂದೂವರೆ ಕಿಲೋ ಸಕ್ಕರೆ ಮತ್ತು ಉಪ್ಪು ವಿತರಿಸಲಾಗುವುದು. ಜನವರಿ ತಿಂಗಳಿನಿಂದ ಈ ಕಿಟ್ ಫಲಾನುಭವಿಗಳ ಕೈ ಸೇರುವ ಸಾಧ್ಯತೆಯಿದೆ.
ಇಂದಿರಾ ಕಿಟ್ ನಲ್ಲಿ ವಿತರಿಸಲು ಅಗತ್ಯವಾದ ಆಹಾರ ಪದಾರ್ಥಗಳನ್ನು ಆಹಾರ ಇಲಾಖೆಯ ಆಯುಕ್ತರು ಟೆಂಡರ್ ಆಹ್ವಾನಿಸಿ ಖರೀದಿಸಬೇಕು. ಆಹಾರ ಪದಾರ್ಥಗಳ ಪ್ರಮಾಣ ಮತ್ತು ಗುಣಮಟ್ಟ ಖಚಿತಪಡಿಸಿಕೊಂಡು ಪ್ರತಿ ಕಿಟ್ ಗೆ ಜಿಎಸ್‌ಟಿ, ಪ್ಯಾಕೇಜಿಂಗ್, ಸಾಗಣೆ ವೆಚ್ಚ, ಸಹಾಯಧನ, ಚಿಲ್ಲರೆ ಲಾಭಾಂಶ, ಲೋಡಿಂಗ್, ಅನ್ ಲೋಡಿಂಗ್, ಮೂರನೇ ವ್ಯಕ್ತಿಯಿಂದ ಗುಣಮಟ್ಟ ತಪಾಸಣೆ ವೆಚ್ಚ ಸೇರಿ ಗರಿಷ್ಠ ಒಟ್ಟು ಮಿತಿ 422.88 ರೂಪಾಯಿ ಎಂದು ಆದೇಶದಲ್ಲಿ ಪ್ರಕಟಿಸಲಾಗಿದೆ.








