ಬೆಂಗಳೂರು : ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ಇದ್ದು, ಪ್ರತ್ಯೇಕ ಕೇಡರ್ ಸೃಷ್ಟಿಸಿ, ಶೀಘ್ರವೇ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಳಗಾವಿ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಅಸಹಜವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಒಂಬತ್ತೂ ಮೃಗಾಲಯಗಳ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ವನ್ಯಜೀವಿ ವೈದ್ಯರ ನೇಮಕ ಆಗುವವರೆಗೂ ಇರುವ ಪಶುವೈದ್ಯರಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ಗಳಲೆ (Hemorrhagic Septicemia)ರೋಗ- ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದೆ ಎಂದು ವೈದ್ಯರು ದೃಢಪಡಿಸಿದ್ದು, ಈ ಸೋಂಕು ಗಾಳಿಯಿಂದ, ನೀರಿನಿಂದ, ಆಹಾರದಿಂದ ಅಥವಾ ಪ್ರಾಣಿ ಪಾಲಕರಿಂದ ಪಸರಿಸಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ಮತ್ತು ಬೇರೆ ಪ್ರಾಣಿಗಳಿಗೆ ಪಸರಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರಮಾಣಿತ ಮಾನದಂಡ (ಎಸ್.ಓ.ಪಿ.)ರೂಪಿಸಲು ಸೂಚನೆ:
ಮೃಗಾಲಯಗಳಲ್ಲಿ ವನ್ಯಜೀವಿಗಳ ನಿರ್ವಹಣೆಯ ಕುರಿತಂತೆ ಮತ್ತು ಇಂತಹ ಸೋಂಕು ಕಾಣಿಸಿಕೊಂಡಾಗ ಹೇಗೆ ಕ್ರಮ ಕೈಗೊಳ್ಳಬೇಕು, ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ರೂಪಿಸಿ, ಕಡ್ಡಾಯವಾಗಿ ಅನುಪಾಲನೆ ಮಾಡುವಂತೆ ನಿರ್ದೇಶಿಸಲೂ ಈಶ್ವರ ಖಂಡ್ರೆ ಸೂಚಿಸಿದರು.
ವನ್ಯಜೀವಿ ಮೃತಪಟ್ಟರೆ ಆಡಿಟ್:
ಮೃಗಾಲಯದಲ್ಲಾಗಲೀ, ವನ್ಯಜೀವಿಧಾಮದಲ್ಲಾಗಲೀ ಷೆಡ್ಯೂಲ್ ಪ್ರಾಣಿಗಳು ಮೃತಪಟ್ಟರೆ ವಿಳಂಬ ಮಾಡದೆ ಆಡಿಟ್ ಮಾಡಿಸಿ, ಸರ್ಕಾರಕ್ಕೆ ಮಾಹಿತಿ ನೀಡಬೇಕು 31 ಕೃಷ್ಣ ಮೃಗಗಳ ಸಾವು ಎಚ್ಚರಿಕೆಯ ಗಂಟೆಯಾಗಿದ್ದು, ಉಳಿದ 7 ಕೃಷ್ಣಮೃಗಗಳಿಗೂ ಸೋಂಕಿರುವ ಕಾರಣ ಅವುಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಹಾಗೂ ರಾಜ್ಯದ ಎಲ್ಲ ಮೃಗಾಲಯಗಳಲ್ಲೂ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬನ್ನೇರುಘಟ್ಟದಲ್ಲಿ ಕಾಡೆಮ್ಮೆ ಸಾವು ತನಿಖೆಗೆ ತಂಡ ರಚನೆ:
ಬನ್ನೇರುಘಟ್ಟದಿಂದ ನೆರೆ ರಾಜ್ಯಕ್ಕೆ ವನ್ಯಜೀವಿ ಸಾಗಿಸುವಾಗ ಅರವಳಿಕೆ ನೀಡಿದ್ದ ಕಾಡೆಮ್ಮೆ ಮೃತಪಟ್ಟಿರುವುದರಲ್ಲಿ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯ ಇದೆ ಎಂದು ದೂರುಗಳು ಬಂದಿದ್ದು, ಈ ಬಗ್ಗೆ ತಂಡ ರಚಿಸಿ ವರದಿ ನೀಡುವಂತೆ ಹಾಗೂ ವನ್ಯಜೀವಿಗಳ ನಿರ್ವಹಣೆಯ ಬಗ್ಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವಂತೆಯೂ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಸಭೆಯಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಮತ್ತಿತರರು ಪಾಲ್ಗೊಂಡಿದ್ದರು.








