ಬೆಂಗಳೂರು: ಶಿವನಸಮುದ್ರದ ಕಾಲುವೆಗೆ ಇಳಿದಿದ್ದ ಗಂಡಾನೆಯನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದ್ದು, ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ನೀರು ಕುಡಿಯಲು ಕಾಲುವೆಗೆ ಇಳಿದ ಆನೆ ಕಳೆದ ಮೂರು ದಿನಗಳಿಂದ ಮೇಲೆ ಬರಲಾರದೆ, ಆಹಾರವೂ ಸಿಗದೆ ನಿತ್ರಾಣವಾಗಿತ್ತು. ಅರಣ್ಯ ಸಿಬ್ಬಂದಿ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ಮೇಲೆತ್ತಿರುವುದಾಗಿ ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆನೆಯೊಂದು ಶಿವನಸಮುದ್ರದ ಕಾಲುವೆಯಲ್ಲಿ ಸಿಲುಕಿದೆ ಎಂಬ ಮಾಹಿತಿ ತಮಗೆ ದೊರೆತ ಕೂಡಲೇ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕರೆ ಮಾಡಿ ತತ್ ಕ್ಷಣ ಕ್ರಮ ಕೈಗೊಂಡು ಆನೆ ರಕ್ಷಿಸಲು ಸೂಚಿಸಿದ್ದಾಗಿಯೂ ಸಚಿವರು ಹೇಳಿದರು.
12 ವರ್ಷದ ಆನೆಯನ್ನು 50 ಅಡಿ ಆಳದಿಂದ ಮೇಲೆತ್ತಲಾಗಿದೆ. ನೀರಿನ ಹರಿವು ಹೆಚ್ಚಿದ್ದ ಕಾರಣ ಕಾರ್ಯಚರಣೆಗೆ ಅಡ್ಡಿಯಾಗಿತ್ತು. ರಕ್ಷಿಸಲಾದ ಆನೆ ಯಶಸ್ವಿಯಾಗಿ ಹತ್ತಿರದ ಅರಣ್ಯದತ್ತ ಹೆಜ್ಜೆ ಹಾಕಿದೆ ಎಂದೂ ತಿಳಿಸಿದ್ದಾರೆ.








