ಬೆಂಗಳೂರು : ಮತದಾರರ ಪಟ್ಟಿಯಿಂದ ಕಿತ್ತು ಹಾಕಲ್ಪಟ್ಟ ಪ್ರತಿಯೊಬ್ಬ ಮತದಾರನ ಮತವೂ ಪ್ರಜಾಪ್ರಭುತ್ವದ ಮಟ್ಟಿಗೆ ಒಬ್ಬ ನಾಗರಿಕನ ಕೊಲೆಗೆ ಸಮಾನ ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ಹುಟ್ಟಿನಿಂದಲೇ ಭ್ರಷ್ಟಾಚಾರದ ಬೀಜ ಹೊತ್ತು ಬಂದ ಚುನಾವಣಾ ಆಯುಕ್ತನ ಪದವಿಯಿಂದ ಬೇರಿನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ
ಈ ದೇಶದಲ್ಲಿ ಪ್ರಜಾಪ್ರಭುತ್ವ ಒಂದು ಜೋಕ್. ಇಂತಹ ಭ್ರಷ್ಟಬೀಜಾಸುರ ಜೋಕರ್‌ಗಳು, ಮತದಾನ ಎಂಬ ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ಪ್ರಕ್ರಿಯೆಯ ಅತ್ಯುನ್ನತ ಸ್ಥಾನದಲ್ಲಿದ್ದಾಗ, ಈ ವ್ಯಕ್ತಿ ಸಂಪೂರ್ಣವಾಗಿ ಭ್ರಷ್ಟ ಎಂದು ಸಾಬೀತುಪಡಿಸಲು ಮೇಲಿನ ಈ ಒಂದು ಹೇಳಿಕೆ ಸಾಕು ಎಂದು ಉಲ್ಲೇಖಿಸಿದ್ದಾರೆ.
ಈ ವ್ಯಕ್ತಿಯ ಕಾರಣದಿಂದಾಗಿ, ಸರಕಾರಿ ಹಣವನ್ನು ಬಳಸಿಕೊಂಡು ಜನರಿಗೆ ಲಂಚ ನೀಡಿ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಗಾಗಿ ಚುನಾವಣೆಯಿಂದಲೇ ನಿಷೇಧಿಸಲ್ಪಡಬೇಕಾಗಿದ್ದ ಒಕ್ಕೂಟವೊಂದು ಮತ್ತೆ ಅಧಿಕಾರಕ್ಕೆ ಬಂದಿದೆ. ‘ಮಹಾಮಾನವ್ ಹೈ ತೋ ಸಬ್ ಕುಚ್ ಮುಮ್ಮಿನ್ ಹೈ’ ಎಂದು ವ್ಯಂಗ್ಯವಾಡಿದ್ದಾರೆ.








