ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿ ಬ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ನಂದಿನಿ ಪಾರ್ಲರ್ ಮಳಿಗೆ ಮಾಲಿಕ ಹಾಗೂ ಆತನ ಮಗ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ಸಮೀಪದ ಅಜಾದ್ ನಗರದ ನಿವಾಸಿ ಮಹೇಂದ್ರ, ಆತನ ಮಗ ದೀಪಕ್, ವಾಹನ ಚಾಲಕ ಮುನಿರಾಜು ಹಾಗೂ ತಮಿಳುನಾಡಿನ ಅಭಿ ಅರಸ್ ಬಂಧಿತನಾಗಿದ್ದು, ಆರೋಪಿಗಳಿಂದ 8,350 ಲೀಟರ್‌ನಕಲಿ ತುಪ್ಪ ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡಿರುವ ನಕಲಿ ತುಪ್ಪ ತಯಾರಿಕಾ ಘಟಕದ ಮಾಲಿಕ ಶಿವಕುಮಾರ್ ಸೇರಿ ಇತರರ ಪತ್ತೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಚಾಮರಾಜಪೇಟೆಯಲ್ಲಿ ಆರೋಪಿ ಮಹೇಂದ್ರ ಹೊಂದಿದ್ದ ನಂದಿನಿ ಪಾರ್ಲರ್ ನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಶುಕ್ರವಾರ ಸಿಸಿಬಿ ಹಾಗೂ ಕೆಎಂಎಫ್ ಜಾಗೃತ ದಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಜಾಲ ಬಯಲಾಯಿತು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಸಿಂಗ್ ತಿಳಿಸಿದ್ದಾರೆ.
ಚಂದ್ರಶೇಖರ್ ಕೆಎಂಎಫ್ ಪರವಾನಗೆ ಪಡೆದಿದ್ದ. ಚಾಮರಾಜಪೇಟೆಯಲ್ಲಿ ಆತನ ನಂದಿನಿ ಪಾರ್ಲರ್ ಇತ್ತು. ಕೆಎಂಎಫ್‌ನಿಂದ ನಂದಿನಿ ತುಪ್ಪ ಖರೀದಿಸಿ ಬಳಿಕ ಆ ತುಪ್ಪವನ್ನು ತಮಿಳುನಾಡಿನ ಅವಿನಾಶಿಗೆ ಸಾಗಿಸುತ್ತಿದ್ದ. ಅಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಆರೋಪಿ ಶಿವಕುಮಾರ್ ನಡೆಸುತ್ತಿದ್ದ.
ನಂದಿನಿ ತುಪ್ಪಕ್ಕೆ ಡಾಲ್ದಾ ಹಾಗೂ ಪಾಮೋಲಿವ್ ಎಣ್ಣೆ ಬೆರೆಸಿ, ಮತ್ತೆ ನಂದಿನಿ ಬ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕಲಬೆರಕೆ ತುಪ್ಪಕ್ಕೆ ಕೆ.ಜಿ.ಗೆ 300 ರು. ಇತ್ತು. ಬಳಿಕ ನಂದಿನಿ ತುಪ್ಪದ ಬ್ಯಾಂಡ್ ಹೆಸರಿನಲ್ಲಿ 700 ರು.ಗೆ ಜನರಿಗೆ ಮಹೇಂದ್ರ ಮಾರಾಟ ಮಾಡುತ್ತಿದ್ದ, ಕಳೆದೊಂದು ವರ್ಷದಿಂದ ಈ ಕಲಬೆರಕೆ ದಂಧೆ ನಡೆದಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








