ಬೆಂಗಳೂರು : ಸಾಮಾನ್ಯವಾಗಿ ಜನರಿಗೆ ಈ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಜವಾಬ್ದಾರಿ ಏನಿರುತ್ತೆ ಅನ್ನೋದು ಗೊತ್ತಿರಲ್ಲ. ಹಾಗಾಗಿ ಇದೀಗ ತಹಸೀಲ್ದಾರ್ ಕರ್ತವ್ಯ ಏನು? ಅವರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದನ್ನು ಈ ಕೆಳಗಿನ ಅಂಶಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.
1. ಗ್ರಾಮಗಳ ಲೆಕ್ಕಗಳ ಪರಿಶೀಲನೆ:
ತಾಲ್ಲೂಕಾ ಜಮಾಬಂದಿ ಅಧಿಕಾರಿಯಾಗಿರುವ ತಹಶೀಲ್ದಾರರು, ಅವರ ತಾಲ್ಲೂಕಾ ವ್ಯಾಪ್ತಿಯ ಶೇಕಡಾ 80 ರಷ್ಟು ಗ್ರಾಮಗಳ ಲೆಕ್ಕಗಳನ್ನು ಪರೀಕ್ಷಿಸಿ, ಸರಿಯಾದ ಲೆಕ್ಕ ಹೊಂದಾಣಿಕೆಗಳನ್ನು ತಯಾರಿಸಿ, ಬಾಕಿ ಮೊತ್ತವನ್ನು ಸರಿಯಾಗಿ, ನಮೂದಿಸತಕ್ಕದ್ದು. ಹಾಗೆಯೇ, ಹುಜೂರು ಜಮಾಬಂದಿ ಅಧಿಕಾರಿಗಳಿಂದ ಅಂತಿಮ ಅನುಮೋದನೆ ಪಡೆಯಲು ಲೆಕ್ಕ ವರದಿಯನ್ನು ಸಿದ್ಧಪಡಿಸಿಟ್ಟುಕೊಂಡಿರುವುದು.
2. ಪಹಣಿ ಪತ್ರಿಕೆಗಳ ಪರಿಶೀಲನೆ:
ಪಹಣಿ ಪತ್ರಿಕೆಗಳನ್ನು ತೀವ್ರವಾಗಿ ಪರಿಶೀಲಿಸಬೇಕು. ಗ್ರಾಮಲೆಕ್ಕಾಧಿಕಾರಿಗಳು ಸರಿಯಾಗಿ ಪಹಣಿ ಬರೆದಿರುವುದನ್ನು ಕಂದಾಯ ನಿರೀಕ್ಷಕರು/ತಹಶೀಲ್ದಾರರು ಪರಿಶೀಲಿಸತಕ್ಕದ್ದು. ಹಾಗೂ ವಿವಿಧ ಬೆಳೆಗಳ ಬಗ್ಗೆ ನಿರ್ವಹಿಸಿದ ಬೆಳೆ ಪತ್ರಿಕೆ ಪರಿಶೀಲಿಸುವುದು (ನಮೂನೆ ನಂ 1 (0)) ರಲ್ಲಿ ಮಾಹಿತಿ ಪಡೆಯುವದು.
3. ಆಕಾರಬಂದ ಹಾಗೂ ಪಹಣಿ ಪತ್ರಿಕೆ:
ಆಕಾರ ಬಂದದಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಪಹಣಿ ಪತ್ರಿಕೆಗಳಲ್ಲಿ ನಮೂದಿಸಿದ ಗ್ರಾಮದ ಒಟ್ಟು ಕ್ಷೇತ್ರ, ಆಕಾರಗಳ ಸಮನ್ವಯತೆಯನ್ನು ಪರಿಶೀಲಿಸಬೇಕು. ಹೆಚ್ಚು/ಕಡಿಮೆ ಇದ್ದಲ್ಲಿ, ಅಂತಹ ಲೋಪ ದೋಷಗಳನ್ನು ಕಂಡು ಹಿಡಿದು ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಆಕಾರ ಬಂದದಲ್ಲಿ ನಮೂದಿಸಿದ ಕ್ಷೇತ್ರಕ್ಕೆ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು. (ನಮೂನೆ ನಂ 1) ಹಾಗೇಯೇ ಹಿಡುವಳಿದಾರರ ತ:ಖೆಯನ್ನು ನಿರ್ವಹಿಸಿರುವುದನ್ನು ಪರಿಶೀಲಿಸುವುದು (ನಮೂನೆ ನಂ 1 (ii)).
4. ತಕರಾರು ಪೈಸಲ್ ತ:ಖ್ಯೆ:
ಗ್ರಾಮಲೆಕ್ಕಾಧಿಕಾರಿಗಳು ತಕರಾರು ಪೈಸಲ್ ತ:ಖ್ಯೆಯನ್ನು ಸರಿಯಾಗಿ ನಿರ್ವಹಿಸಿದ ಬಗ್ಗೆ ಪರಿಶೀಲಿಸುವುದು. ಅನಧೀಕೃತ ಒತ್ತುವರಿಗೆ ಟಿ.ಟಿ. ದಂಡ ವಿಧಿಸಿದ್ದರ ಬಗ್ಗೆ ಪರಿಶೀಲನೆ ಮಾಡುವುದು ಹಾಗೂ ಭೂ ಮಂಜೂರಾತಿ ಶರ್ತುಗಳನ್ನು ಉಲ್ಲಂಘಿಸಿದ್ದರ ವಿವರಗಳನ್ನು ಕೂಡ ಪರಿಶೀಲಿಸುವುದು.
5. ಕಮ್ಮಿ/ಜಾಸ್ತ ತ:ಖೆ ಮತ್ತು ಆದೇಶಗಳು:
ಈ ತ:ಖ್ಯೆಯನ್ನು ಕಳೆದ ವಾರ್ಷಿಕ ಲೆಕ್ಕ ತ:ಖ್ಯೆ ಆಧಾರದ ಮೇಲೆ ತಯಾರಿಸಬೇಕು. ತಪ್ಪು ನಿರ್ಧರಣೆಯಾದಲ್ಲಿ/ ಕಮ್ಮಿ/ ಜಾಸ್ತಿಯಾದಲ್ಲಿ, ಅದನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ಈ ಬಗ್ಗೆ ಸಕ್ಷಮ ಅಧಿಕಾರಿಗಳಿಂದ ಸೂಕ್ತ ಆದೇಶ ಪಡೆಯಲು ಕ್ರಮ ಜರುಗಿಸುವುದು (ನಮೂನೆ 0 2).
6. ವಾರ್ಷಿಕ ಲೆಕ್ಕಗಳ ಹೊಂದಾಣಿಕೆಯನ್ನು ನಿಗದಿಪಡಿಸಿದ ನಮೂನೆಯಲ್ಲಿ ತಯಾರಿಸುವುದು (ನಮೂನೆ 3)
7. ಕಂದಾಯ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಬಾಕಿ ಪಟ್ಟಿಗಳನ್ನು ತಯಾರಿಸುವುದು.
ಭೂ ಕಂದಾಯ/ನೀರಾವರಿ ಕರ/ಸಾಲಗಳು/ಇತರೆ ಸರ್ಕಾರಿ ಬಾಕಿ ಕುರಿತು ನಿರ್ವಹಿಸಲಾದ ಕುಳವಾರು ಬಾಕಿ ಪಟ್ಟಿಯನ್ನು ಹಾಗೂ ವಸೂಲಾತಿಯ ವಿವರಗಳನ್ನು ಮತ್ತು ಬಾಕಿ ವಿವರಗಳನ್ನು ಕಾಲೋಚಿತಗೊಳಿಸಿರುವುದನ್ನು ಪರಿಶೀಲಿಸುವುದು (ನಮೂನೆ 4 ಹಾಗೂ 5).
8. ಹಕ್ಕು ದಾಖಲಾತಿಗಳನ್ನು ಕಾಲೋಚಿತಗೊಳಿಸುವುದು.
ಭೂಕಂದಾಯ ಅಧಿನಿಯಮ 128ರ ಅಡಿಯಲ್ಲಿ ಬಾಕಿ ಇರುವ ಎಲ್ಲಾ ಖಾತೆ ಬದಲಾವಣೆ
ಪ್ರಕರಣಗಳ ಬಗ್ಗೆ ವರದಿಯನ್ನು ಪಡೆದುಕೊಂಡು ತಕರಾರು ರಹಿತ ಪ್ರಕರಣಗಳ ವಿಲೇಯನ್ನು ನಿಗದಿತ ಅವಧಿಯಲ್ಲಿ ಮಾಡುವುದು ಹಾಗೂ ತಕರಾರು ಪ್ರಕರಣಗಳನ್ನು ಉಭಯ ಪಕ್ಷದವರಿಗೆ ಸೂಕ್ತ ಆದೇಶ ನೀಡಿ ಆದಷ್ಟು ತೀವ್ರವಾಗಿ ಮಾಡಿರುವುದನ್ನು ಪರಿಶೀಲಿಸುವುದು. ಅನಾವಶ್ಯಕವಾಗಿ ವಿಳಂಬ ಮಾಡಿದ ಸಂದರ್ಭಗಳನ್ನು ಪರಿಶೀಲಿಸುವುದು ಹಾಗೂ ಸೂಕ್ತ ತಿಳುವಳಿಕೆ ನೀಡಲು ಕ್ರಮ ಜರುಗಿಸುವುದು
(16(i), (ii), (iii))
ಮರಣ ದಾಖಲೆಗಳನ್ನು ಪರಿಶೀಲಿಸಿ, ಖಾತೆದಾರರು ಮೃತ ಪಟ್ಟಲ್ಲಿ, ಸದರಿಯವರ ವಾರಸದಾರರ ಹೆಸರುಗಳನ್ನು ಗ್ರಾಮದಪ್ತರದಲ್ಲಿ ದಾಖಲಿಸಲು ಕ್ರಮ ಜರುಗಿಸಿದ್ದರ ವಿವರಗಳನ್ನು ಪರಿಶೀಲಿಸುವುದು. ಹಕ್ಕು ದಾಖಲೆ ತಕರಾರು ಪ್ರಕರಣಗಳ ವಿವರಗಳನ್ನು ಪರಿಶೀಲಿಸಿ, ಅವಶ್ಯಕ ನಿರ್ದೇಶನಗಳನ್ನು ನೀಡುವುದು.
9. ಸಾಲದ ರಜಿಸ್ಟರಗಳ ಲೆಕ್ಕ ಹೊಂದಾಣಿಕೆ:
ತಹಶೀಲ್ದಾರ ಕಾರ್ಯಾಲಯದಲ್ಲಿ ನಿರ್ವಹಿಸಿದ ಸಾಲಗಳ ರಜಿಸ್ಟರಗಳೊಂದಿಗೆ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ನಿರ್ವಹಿಸಿದ ರಜಿಸ್ಟರಗಳೊಂದಿಗೆ ತಾಳೆ ನೋಡಬೇಕು ಹಾಗೂ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳಬೇಕು.
10. ಬೇಡಿಕೆ ಪಟ್ಟಿಗಳನ್ನು ಕಾಲೋಚಿತಗೊಳಿಸುವುದು.
ವಿವಿಧ ಕಾಯ್ದೆಗಳಡಿ, ಸರ್ಕಾರಕ್ಕೆ ಪಾವತಿಯಾಗಿರುವ ಮೊತ್ತವನ್ನು ಬೇಡಿಕೆ ತ:ಖ್ಯೆಯಲ್ಲಿ ದಾಖಲಿಸಿಕೊಂಡು ಕಾಲೋಚಿತಗೊಳಿಸಬೇಕು.
11. ಭೂ ಮಂಜೂರಾತಿ ಶರ್ತುಗಳ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ
ಭೂಸುಧಾರಣೆ/ಭೂಮಂಜೂರಾತಿ ಅಥವಾ ಇತರ ಕಾಯ್ದೆಯಡಿ ಮಂಜೂರಾದ ಜಮೀನುಗಳ ಬಗ್ಗೆ ವಿಧಿಸಲಾದ ಶರ್ತುಗಳನ್ನು ಪಾಲಿಸಲಾಗಿದೆಯೇ? ಹೇಗೆ ಎಂಬುದನ್ನು ಪರಿಶೀಲಿಸತಕ್ಕದ್ದು. ಶರ್ತುಗಳ ಉಲ್ಲಂಘನೆಯಾಗಿದ್ದಲ್ಲಿ, ಸ್ಥಾನಿಕ ವಿಚಾರಣೆ ಜರುಗಿಸಿ, ನಿಯಮಗಳನುಸಾರ ಕ್ರಮ ಜರುಗಿಸುವ್ಯದು.(ನಮೂನೆ-7)
12. ಜನನ/ಮರಣ ನೋಂದಣಿ
ಗ್ರಾಮಲೆಕ್ಕಾಧಿಕಾರಿಗಳು ಜನನ/ಮರಣ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡುವುದು. ಅವಶ್ಯವೆನಿಸಿದಲ್ಲಿ, ಸ್ಥಾನಿಕ ವಿಚಾರಣೆ ಜರುಗಿಸುವುದು.
13. ಅತಿಕ್ರಮಣ:
ಗ್ರಾಮದಲ್ಲಿ ಸಾರ್ವಜನಿಕ ಸ್ಥಳ ಅತಿಕ್ರಮಣಕ್ಕೊಳಗಾದಲ್ಲಿ, ಅದನ್ನು ಸ್ಥಳದಲ್ಲಿಯೇ ತೆಗೆಸಲು ಕ್ರಮ ಜರುಗಿಸತಕ್ಕದ್ದು.
14. ಕೆರೆ ಮತ್ತು ಕೆರೆ ಏರಿಗಳು:
ಜಮಾಬಂದಿ ಅಧಿಕಾರಿಗಳು ಕೆರೆ/ಕೆರೆ ಏರಿಗಳನ್ನು ಪರಿಶೀಲಿಸುವುದು. ಇವುಗಳ ಸಮರ್ಪಕ ನಿರ್ವಹಣೆ ಬಗ್ಗೆ ಅವಶ್ಯಕ ಕ್ರಮ ಜರುಗಿಸುವುದು (ನಮೂನೆ 0 8)
15. ಹದ್ದು ಬಸ್ತುಗಳು:
ಹದ್ದು ಬಸ್ತುಗಳು ಸರಿಯಾಗಿರುವ ಬಗ್ಗೆ ಪರಿಶೀಲನೆ ಮಾಡುವುದು.
16. ಸಿ ಮತ್ತು ಡಿ ವರ್ಗದ ಜಮೀನುಗಳು:
ಸಿ ಮತ್ತು ಡಿ ವರ್ಗದ ಜಮೀನುಗಳನ್ನು ಅರಣ್ಯ ಇಲಾಖೆಗೆ ನೀಡಲಾಗಿದ್ದು, ಸದರಿಯವರು ಅರಣ್ಯ ಬೆಳೆಸಿದ ಬಗ್ಗೆ ಪರಿಶೀಲಿಸುವುದು. ಸರ್ಕಾರಿ ಜಾಗಗಳು ಲಭ್ಯವಿದ್ದಲ್ಲಿ, ಅವುಗಳನ್ನು ಸರ್ಕಾರಿ ಕಾರ್ಯಾಲಯಗಳ ನಿರ್ಮಾಣ ಕುರಿತು ಕಾಯ್ದಿರಿಸಿರುವುದನ್ನು ಪರಿಶೀಲಿಸುವುದು.
17. ಅಭಿವೃದ್ಧಿ ವಿಷಯಗಳು:
ಬೇರೆ ಬೇರೆ ಅಭಿವೃದ್ಧಿ ಇಲಾಖೆಗಳು ಗ್ರಾಮದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ವೀಕ್ಷಿಸುವುದು ಹಾಗೂ ಆ ಬಗ್ಗೆ ಗ್ರಾಮಲೆಕ್ಕಾಧಿಕಾರಿ ವಿವರವನ್ನು ನಮೂದಿಸಿರುವುದನ್ನು ಪರಿಶೀಲಿಸುವುದು. ಅಭಿವೃದ್ಧಿ ಕಾರ್ಯಕ್ರಮದಡಿ, ಸಾಮಗ್ರಿಗಳ ಉಚಿತ ವಿತರಣೆ ಪರಿಶೀಲಿಸುವುದಲ್ಲದೇ ಬೇರೆ ಬೇರೆ ಅನುಷ್ಠಾನಾಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಲ್ಲಿ, ಅವುಗಳನ್ನು ಕೂಡ ಪರಿಶೀಲಿಸುವುದು (ನಮೂನೆ-9)
18. ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ತ ಶಕ್ತಿ ಪೂರೈಕೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡುವುದು.
19. ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ, ಆರಾಧನಾ ಯೋಜನೆ/ಮಂದಿರಗಳ ನಿರ್ಮಾಣ, ನಿರ್ವಹಣೆಗಳನ್ನು ಹಾಗೂ ಈ ಕುರಿತಾಗಿ ನಿರ್ವಹಿಸಿದ ಅಂಕಿ ಅಂಶಗಳನ್ನು ಪರಿಶೀಲಿಸುವುದು.
20. ಸಾರ್ವಜನಿಕ ಮತ್ತು ಆರ್ಥಿಕ ಕಾರ್ಯಕ್ರಮಗಳಡಿ ಕೈಗೊಂಡಿರುವ ನಾಗರೀಕ ಸೌಲಭ್ಯಗಳ ಬಗ್ಗೆ ವಿಚಾರಿಸುವುದು ಹಾಗೂ ಈ ಕುರಿತಾದ ಅಂಕಿ ಅಂಶಗಳನ್ನು ಪರಿಶೀಲಿಸುವುದು.








