ಮಂಡ್ಯ : ಮೂರ್ನಾಲ್ಕು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಗೂ 10 ಕ್ಕೂ ಹೆಚ್ಚು ಇಲಾಖಾ ಅಧಿಕಾರಿಗಳು ಯಾವುದೇ ಕಾರಣ ನೀಡದೇ ಗೈರಾಗಿದ್ದಾರೆ. ಅಂತಹ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಎಂದು ತಾ.ಪಂ ಇಓ ರಾಮಲಿಂಗಯ್ಯ ಅವರಿಗೆ ಶಾಸಕ ಕೆ.ಎಂ.ಉದಯ್ ಸೂಚನೆ ನೀಡಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ನಾಲ್ಕೈದು ಬಾರಿ ಕೆಡಿಪಿ ಸಭೆ ನಡೆಸಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಸೂಚನೆ ನೀಡಿದ್ದರು ಸಹ ಅಧಿಕಾರಿಗಳು ತಮ್ಮ ಛಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಿರಿ. ಈ ಹಿಂದೆ ನಿಮ್ಮಿಷ್ಟದ ರೀತಿ ಕೆಲಸ ಮಾಡ್ತಿದ್ರಿ ಆದರೆ ಅದಕ್ಕೆಲ್ಲ ನಾನು ಆಸ್ಪದ ಕೊಡಲ್ಲ. ಇದೇ ರೀತಿ ನಿಮ್ಮ ನಡತೆ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಮದ್ದೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದು, ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ವೃತ್ತ ನಿರೀಕ್ಷಕರಾದ ನವೀನ್ ಹಾಗೂ ನಾರಾಯಣಿ ಅವರುಗಳಿಗೆ ಶಾಸಕ ಕೆ.ಎಂ.ಉದಯ್ ಸೂಚನೆ ನೀಡಿದರು. ಕೆಲ ದಿನಗಳ ಹಿಂದೆ ನಗರದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಸಾಕಷ್ಟು ಅನಾಹುತ ಸಂಭವಿಸಿತು. ಘಟನೆ ಸಂಬಂಧ ಈ ಹಿಂದೆ ಇದ್ದಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ನಿಮ್ಮನ್ನು ನಿಯೋಜಿಸಲಾಗಿದೆ. ಹೀಗಾಗಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಸಂಭವಿಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಕೆಲ ಇಲಾಖೆಗಳಿಂದ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಸಂಬಂಧ ಪಟ್ಟ ಅಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ತಿಳಿದು ಬಂದರೇ ಅವರನ್ನು ಮುಲಾಜಿಲ್ಲದೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ನಗರದ ಸ್ವಚ್ಚತೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಗರಸಭಾ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇದಕ್ಕೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸಾಧ್ಯವಿಲ್ಲ ಸಾರ್ವಜನಿಕರು ಕೂಡ ಇದಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇನ್ನು ತಾಲೂಕಿನಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ ಎಂದು ಸಭೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ವಲಯ ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ, ತಾಲೂಕಿನಲ್ಲಿ 10 ಕ್ಕೂ ಚಿರತೆಗಳಿದ್ದು, ಈಗಾಗಲೇ 4 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಇನ್ನುಳಿದ ಚಿರತೆ ಸೆರಗೆ 9 ಕಡೆ ಬೋನುಗಳನ್ನು ಇಟ್ಟಿದ್ದು, ಅವುಗಳು ಸಿಗದಿದ್ದ ಪರಿಣಾಮ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ತಿಳಿಸಿದರು.
ಪಶು ಆರೋಗ್ಯಾಧಿಕಾರಿ ಡಾ.ಗೋವಿಂದ್ ಮಾತನಾಡಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಿಡಿದು ಸಂತಾನ ಹರಣ ಚುಚ್ಚು ಮದ್ದು ಹಾಕಬೇಕಾಗಿದ್ದು, ಈಗಾಗಲೇ 280 ಕ್ಕೂ ನಾಯಿಗಳಿಗೆ ಚುಚ್ಚು ಮದ್ದು ಹಾಕಲಾಗಿದೆ ಎಂದು ಸಭೆಗೆ ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಚತೆ ಮಾಡಲು ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಪಂ ಗೆ ಒಳಪಡುವ ಪೌರಕಾರ್ಮಿಕರಿಗೆ ತಿಳಿಸಿ ಸ್ವಚ್ಚತೆ ಮಾಡುವಂತೆ ಬಿಇಓ ಧನಂಜಯ ಅವರಿಗೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ ತಿಳಿಸಿದರು.
ತಾಲೂಕಿನ ಅಭಿವೃದ್ಧಿಗೆ ಎರಡೇ ವರ್ಷಗಳಲ್ಲಿ 1500 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ನನ್ನಿಂದ ಮಾತ್ರ ಸಾಧ್ಯವಿಲ್ಲ ಇದರ ಜೊತೆಗೆ ಇಲಾಖಾ ಅಧಿಕಾರಿಗಳು ಸಹಕರಿಸದರೇ ಮಾತ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಕೊಪ್ಪ ಭಾಗದ ಕೊನೆ ಭಾಗಕ್ಕೆ ಕೃಷಿ ಚಟುವಟಿಕೆಗಳಿಗೆ ನೀರು ಹರಿಯುತ್ತಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಇಇ ನಂಜುಂಡೇಗೌಡ ಮಾತನಾಡಿ, ನಾಲೆಗಳ ಆಧುನಿಕರಣ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದೆ. ಇನ್ನು ಮುಂದೆ ಇಂತಹ ತೊಂದರೆ ಆಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಇನ್ನು ಕೊಪ್ಪ ಹೋಬಳಿ ಅವ್ವೇರಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರೈಸ್ ಮಿಲ್ ನಲ್ಲಿ ಸೌಲಭ್ಯ ಕಲ್ಪಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್ ಅವರನ್ನು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ತರಾಟೆಗೆ ತೆಗೆದುಕೊಂಡರು.
ವಸತಿ ಶಾಲೆಯ ಕಟ್ಟಡ ನಿರ್ಮಾಣ ಹಲವು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ವ್ಯಾಸಂಗ ಮಾಡುತ್ತಿರುವ 52 ವಿದ್ಯಾರ್ಥಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ತಾವು ವಿಧಾನ ಪರಿಷತ್ ಸಭೆಯಲ್ಲಿ ಚರ್ಚೆ ನಡೆಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಬೇಜವಾಬ್ದಾರಿಯಿಂದ ಇದ್ದೀರಿ ಎಂದು ಹರಿಹಾಯ್ದರು.
ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡವರ ಮಕ್ಕಳಾಗಿದ್ದಾರೆ. ವಸತಿ ಶಾಲೆಯ ಕಟ್ಟಡ ಪೂರ್ಣಗೊಳ್ಳುವವರೆಗೆ ಕನಿಷ್ಠ ಬಾಡಿಗೆ ಕಟ್ಟಡದಲ್ಲಾದರೂ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಬೇಕೆಂದು ಸಮಾಜ ಕಲ್ಯಾಣ ಅಧಿಕಾರಿ ನಾಗರಾಜ್ ಅವರಿಗೆ ತಾಕೀತು ಮಾಡಿದರು.
ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಮ್ಮುಖದಲ್ಲಿ ಚರ್ಚೆ ನಡೆಸಿದ್ದೆ ಇದಕ್ಕೆ ಸಚಿವರು ಸೋಮನಹಳ್ಳಿ ಬಳಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಸಬೂಬು ಹೇಳಿದ್ದರು ಹೊರತು ಸಮಸ್ಯೆ ಮಾತ್ರ ಬಗ್ಗೆ ಹರಿದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಗತಿಯ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಆಡಳಿತಾಧಿಕಾರಿ ಶಿವಲಿಂಗಯ್ಯ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಓ ರಾಮಲಿಂಗಯ್ಯ, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
‘HDK’ಗೆ ರಾಜ್ಯ ಸರ್ಕಾರ ಸೂಕ್ತ ಸಹಕಾರ ನೀಡುತ್ತಿಲ್ಲ: MLC ವಿವೇಕಾನಂದ ಆರೋಪ
ಸಿಎಂ ಆದೇಶಕ್ಕೂ ಅಧಿಕಾರಿಗಳೂ ಡೋಂಟ್ ಕೇರ್: ಮಂಡ್ಯದಲ್ಲಿ ಕೆಡಿಪಿ ಸಭೆಯಲ್ಲೇ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆ








