ಮಧುಮೇಹವು ಸಾಂಕ್ರಾಮಿಕವಲ್ಲದ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು ನಿಯಂತ್ರಿಸಿಕೊಳ್ಳುವಲ್ಲಿ ನಿಯಮಿತ ತಪಾಸಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ನಾಗರಾಜನಾಯ್ಕ್ಅವರು ಹೇಳಿದರು.
ಅವರು ಇಂದು ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ಮಧುಮೇಹ ತಪಾಸಣೆ ಮತ್ತು ಸಲಹಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇನ್ಸುಲಿನ್ ಸಂಶೋಧಕ ಫ್ರೆಡೆರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕರಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು, ಅದರ ಪರಿಣಾಮಗಳನ್ನು ತಿಳಿಸುವುದು ಮತ್ತು ತಡೆಗಟ್ಟುವಿಕೆ ಹಾಗೂ ನಿರ್ವಹಣೆಯ ಕುರಿತು ಮಾಹಿತಿಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶಗಳಲ್ಲೊಂದಾಗಿದೆ ಎಂದ ಅವರು, ಮಧುಮೇಹ ಹೊಂದಿರುವ ಅನೇಕ ಜನರಿಗೆ ತಮ್ಮ ಸ್ಥಿತಿಯ ಬಗ್ಗೆ ತಿಳಿದಿರುವುದಿಲ್ಲ, ಇದು ತೀವ್ರ ತೊಡಕುಗಳಿಗೆ ಕಾರಣವಾಗುತ್ತದೆ. ಆರಂಭಿಕ ಪತ್ತೆ ಮತ್ತು ನಿಯಮಿತ ಪರೀಕ್ಷೆಯ ಮೂಲಕ ನಿಯಂತ್ರಿಸಬಹುದಾಗಿದೆ ಎಂದವರು ತಿಳಿಸಿದರು.
ಮಧುಮೇಹ ಹೊಂದಿರುವ 50% ಕ್ಕಿಂತ ಹೆಚ್ಚು ಜನರಿಗೆ ತಮ್ಮ ಆರೋಗ್ಯದ ವಾಸ್ತವ ಸ್ಥಿತಿಯ ಬಗ್ಗೆ ತಿಳಿಯದಾಗಿದೆ. ಕುರುಡುತನ, ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳಿಗೆ ಕಾರಣವಾಗಬಹುದಾದ ಮಧುಮೇಹಕ್ಕೆ ಜಾಗತಿಕವಾಗಿ ಸುಮಾರು 808 ಮಿಲಿಯನ್ ಜನರು ಬಳಲುತ್ತಿದ್ದಾರೆ ಅಲ್ಲದೆ ಪ್ರತಿ ವರ್ಷ ಎರಡು ಮಿಲಿಯನ್ ಜನರು ಮಧುಮೇಹದಿಂದ ಮರಣ ಹೊಂದುತ್ತಿದ್ದಾರೆ. ಏಷ್ಯಾದಲ್ಲಿ 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 246 ಮಿಲಿಯನ್ಗಿಂತಲೂ ಹೆಚ್ಚು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಎಂದರು.
ಮಧುಮೇಹವು ಮಾನವ ದೇಹವನ್ನು ಕಡಿಮೆ ಸಮಯದಲ್ಲಿ ಹೆಚ್ಚು ದುರ್ಬಲಗೊಳಿಸುವ ಮತ್ತು ರೋಗಗಳಿಗೆ ಗುರಿಯಾಗಿಸುವ ಸೂಕ್ಷ್ಮ ಕಾಯಿಲೆಗಳಲ್ಲಿ ಒಂದಾಗಿದೆ. ಮಾನವ ದೇಹವನ್ನು ರೋಗಗಳಿಗೆ ಹೇಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ ಅಲ್ಲದೇ ದೀರ್ಘಕಾಲದ ಅಥವಾ ತೀವ್ರವಾದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದರು.
ರಾಜ್ಯದಲ್ಲಿ 12-16% ಜನರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 15.8% ಜನರು ಮಧುಮೇಹ ಹೊಂದಿರುವ ಬಗ್ಗೆ ಎನ್.ಎಫ್.ಹೆಚ್.ಎಸ್-5ನಿಂದ ವರದಿಯಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರಕ್ತ ತಪಾಸಣೆ ನಡೆಸಿದ 4,59,138 ಜನರ ಪೈಕಿ 64980ಜನರಿಗೆ ಮಧುಮೇಹ ಮತ್ತು 114327ಜನರಿಗೆ ರಕ್ತದೊತ್ತಡ ಇರುವುದನ್ನು ಗುರುತಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ|| ಸಂಗೀತಾ, ಡಾ|| ಅಫೀಫಾ, ಶಂಕರ್, ಬಸವರಾಜ್ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೌಕರರು ಹಾಗೂ ಸಾರ್ವಜನಿಕರಿಗೆ ಉಚಿತ ಮಧುಮೇಹ ತಪಾಸಣೆ ನಡೆಸಿ, ವೈದ್ಯಕೀಯ ಸಲಹೆ ನೀಡಲಾಯಿತು.








