ಬೆಂಗಳೂರು : ಮನೆ ಕೆಲಸದವಳ ಮೇಲೆ ಅತ್ಯಾಚಾರ ಆರೋಪದಲ್ಲಿ ಜೀವಿತಾವಧಿ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಅಲ್ಲಿ ವಿಚಾರಣೆ ನಡೆಸಿತು. ಈ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಪ್ರಜ್ವಲ್ ರೇವಣ್ಣಗೆ ಜೀವಿತಾವಧಿ ಶಿಕ್ಷೆಯ ಆದೇಶಕ್ಕೆ, ಸೂಕ್ತ ಆಧಾರಗಳು ಇಲ್ಲವಾಗಿವೆ ಎಂದು ತಿಳಿಸಿದರು.
ವಿಚಾರಣೆ ವೇಳೆ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಗಳು ಗೊಂದಲಮಯವಾಗಿದ್ದು, ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಧಿಸಿರುವ ಜೀವಿತಾವಧಿ ಶಿಕ್ಷೆಯ ಆದೇಶಕ್ಕೆ ಸೂಕ್ತ ಆಧಾರಗಳು ಇಲ್ಲವಾಗಿವೆ.
ಹಾಲಿ ಪ್ರಕರಣದಲ್ಲಿ ಸಾಕ್ಷಿಗಳ ನಡುವೆ ಹೊಂದಾಣಿಕೆ ಇಲ್ಲ. ಅರ್ಜಿದಾರರ ವಿರುದ್ಧ ಆರೋಪ ಸಾಬೀತಾಗುವಂತಹ ಯಾವುದೇ ಪುರಾವೆಗಳಿಲ್ಲ. ವಿದ್ಯುನ್ಮಾನ, ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಾಕ್ಷಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಆಕ್ಷೇಪಿತ ವಿಡಿಯೊಗಳು ವಿಶ್ವಾಸಾರ್ಹವಾಗಿಲ್ಲ ಎಂದು ಪೀಠಕ್ಕೆ ಹೇಳಿದರು.
ಆಗಸ್ಟ್ 1ರಂದು ಪ್ರಜ್ವಲ್ರನ್ನು ದೋಷಿ ಎಂದು ಘೋಷಿಸಲಾಗಿದ್ದು, ಆಗಸ್ಟ್ 2ರಂದು ಶಿಕ್ಷೆ ವಿಧಿಸಲಾಗಿದೆ. ಪ್ರಜ್ವಲ್ಗೆ ಜೀವನ ಪರ್ಯಂತ ಶಿಕ್ಷೆ ವಿಧಿಸುವುದಕ್ಕೂ ಮುನ್ನ ಅವರನ್ನು ಸಮರ್ಥಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಲಾಗಿಲ್ಲ ಎಂದು ಪೀಠಕ್ಕೆ ವಿವರಣೆ ನೀಡಿದರು. ವಾದ ಆಲಿಸಿ ನ್ಯಾಯಪೀಠ, ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮಕುಮಾರ್ ಅವರಿಗೆ ನವೆಂಬರ್ 25ರಂದು ವಾದಿಸಲು ದಿನ ನಿಗದಿಗೊಳಿಸಿತು ವಿಚಾರಣೆ ಮುಂದೂಡಿತು.








