ಮೈಸೂರು: ಮುಂಬೈ ಪೊಲೀಸ್ ಎಂದು ಹೇಳಿಕೊಂಡು ಡಿಜಿಟಲ್ ಅರೆಸ್ಟ್ ವಾತಾವರಣ ಸೃಷ್ಟಿಸಿ ಕೇರಳದ ವ್ಯಕ್ತಿಯೊಬ್ಬರಿಂದ 20.50 ಲಕ್ಷ ರೂ. ಸುಲಿಗೆ ಮಾಡಿದ ಆರೋಪದಲ್ಲಿ ಮೈಸೂರಿನ 21 ವರ್ಷದ ಯುವತಿಯನ್ನು ಕೇರಳದ ಅಲಪ್ಪುಜ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಅಶೋಕಪುರಂ ನಿವಾಸಿ ಚಂದ್ರಿಕಾ (21) ಬಂಧಿತ ಯುವತಿ. ಅಶೋಕಪುರಂ ಠಾಣೆ ಇನ್ಸ್‌ಪೆಕ್ಟರ್ ಸಿ.ರೋಹಿತ್ ಅವರು ‘ಈಟಿವಿ ಭಾರತ’ಕ್ಕೆ ಪ್ರತಿಕ್ರಿಯೆ ನೀಡಿ, ಅಲಪ್ಪುಜ ಸೈಬರ್ ಅಪರಾಧ ವಿಭಾಗದ ಪೊಲೀಸರು ಆರೋಪಿಯ ನಿವಾಸ ಪತ್ತೆ ಹಚ್ಚಲು ಮತ್ತು ಬಂಧಿಸಲು ನಮ್ಮ ಸಹಕಾರ ಪಡೆದಿದ್ದಾರೆ ಎಂದು ತಿಳಿಸಿದರು.
ಉದ್ಯೋಗಿಯನ್ನು ಸಂಪರ್ಕಿಸಿ ಮುಂಬೈ ಪೊಲೀಸ್ ಪ್ರಧಾನ ಕಚೇರಿಯ ನೆಹಶರ್ಮ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ನಿಮ್ಮ ಹೆಸರಿನಲ್ಲಿ ಹಲವು ನಕಲಿ ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳನ್ನು ತೆರೆಯಲಾಗಿದೆ. ಅವುಗಳನ್ನು ಕೋಟ್ಯಂತರ ರೂ. ಅಪರಾಧಗಳಿಗೆ ಬಳಸಲಾಗುತ್ತಿದೆ. ನೀವು 25 ಲಕ್ಷ ರೂ. ಕಮಿಷನ್ ಪಡೆದಿದ್ದೀರಿ ಎಂದು ದೂರುದಾರನಿಗೆ ಹೆದರಿಸಿದ್ದರು. ಅಲ್ಲದೆ ನಾವು ಹೇಳಿದಂತೆ ಕೇಳದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಿ ವಂಚಿಸಿದ್ದಾರೆ.
ಅಲಪ್ಪುಜ ಸೈಬರ್ ಪೊಲೀಸ್ ಅಪರಾಧ ವಿಭಾಗ ನೀಡಿದ ಹಲವು ಸಮನ್ಸ್ಗಳನ್ನು ಯುವತಿ ನಿರ್ಲಕ್ಷ್ಯಿಸಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ ಕೇರಳ ಪೊಲೀಸರು ಬಂದಿದ್ದರು. ಅಲಪ್ಪುಜ ಸಮೀಪದ ಖಾಸಗಿ ಕಂಪೆನಿ ಉದ್ಯೋಗಿಗೆ ಕರೆ ಮಾಡಿ, ಮುಂಬೈ ಪೊಲೀಸ್ ಅಧಿಕಾರಿಗಳಂತೆ ನಟಿಸಿ ವಂಚಿಸಲಾಗಿದೆ ಎಂದು ಅಶೋಕಪುರಂ ಪೊಲೀಸರು ತಿಳಿಸಿದ್ದಾರೆ.








