ಬೆಂಗಳೂರು : ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಯಡಿ ನೋಂದಣಿಯಾಗಿರುವ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ವೇಳೆ ಮಾಸಿಕ ವೇತನಸಹಿತ ಒಂದು ರಜೆ ನೀಡುವಂತೆ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.
ಕಾರ್ಖಾನೆಗಳ ಕಾಯ್ದೆ-1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ-1961, ತೋಟ ಕಾರ್ಮಿಕರ ಕಾಯ್ದೆ-1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ-1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ-1961ರಡಿ ನೋಂದಣಿಯಾಗಿರುವ ಎಲ್ಲ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18ರಿಂದ 52 ವರ್ಷದ ವಯೋಮಿತಿಯ ಎಲ್ಲ ಖಾಯಂ ಆಥವಾ ಗುತ್ತಿಗೆ ಹೊರಗುತ್ತಿಗೆ ಮಹಿಳಾ ನೌಕರರಿಗೆ ಅವರ ಆರೋಗ್ಯ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ಸದುದ್ದೇಶದಿಂದ ಅವರ ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಸಂಬಂಧಿಸಿದ ಉದ್ಯೋಗದಾತರು ಒದಗಿಸುವಂತೆ ಸೂಚನೆ ನೀಡಲಾಗಿದೆ.
ಕಾರ್ಮಿಕರು, ಕಾರ್ಮಿಕ ಸಂಘಗಳು, ಮಾಲೀಕರು, ಮಾಲೀಕ ಸಂಘಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು, ಸರ್ಕಾರಿ ನೌಕರರ ಒಕ್ಕೂಟ ಮೊದಲಾದವರಿಂದ ಪ್ರಸ್ತಾಪಿತ ಋತುಚಕ್ರ ರಜಾನೀತಿಯ ಸಂಬಂಧ ಒಟ್ಟು 75 ಅಭಿಪ್ರಾಯಗಳು ಸ್ವೀಕೃತವಾಗಿದ್ದು, ಈ ಪೈಕಿ 56 ಅಭಿಪ್ರಾಯಗಳು ಪ್ರಸ್ತಾಪಿತ ಋತುಚಕ್ರ ರಜಾನೀತಿಯ ಪರವಾಗಿವೆ, 19 ಅಭಿಪ್ರಾಯಗಳು ವಿರುದ್ಧವಾಗಿವೆ. ಉದ್ದೇಶಿತ ರಜಾನೀತಿಯನ್ನು ಬೆಂಬಲಿಸಿ ಸ್ವೀಕೃತವಾದ 56 ಅಭಿಪ್ರಾಯಗಳಲ್ಲಿ 26 ಅಭಿಪ್ರಾಯಗಳು ಮಾಲೀಕ ವರ್ಗದವರು, 7 ಕಾರ್ಮಿಕ ಸಂಘಗಳು, 19 ನೌಕರರು, 1 ಸಾರ್ವಜನಿಕರು, 1 ಸರ್ಕಾರಿ ನೌಕರರ ಒಕ್ಕೂಟ, 2 ಮಹಿಳಾ ಸಂಘಗಳು ನೀಡಿವೆ.








