ಮಡಿಕೇರಿ : ರಾಜ್ಯದಲ್ಲಿ 42 ಲಕ್ಷ ಜಮೀನು ಮೃತರ ಹೆಸರಿನಲ್ಲಿದ್ದು, ಇದನ್ನು ಸಹ ಪಟ್ಟಿ ಮಾಡಲಾಗಿದೆ. ಈ ಪೌತಿ ಖಾತೆ ಆಂದೋಲನಡಿ ರೈತರ ಮನೆ ಬಾಗಿಲಿಗೆ ಹೋಗಿ ಕುಟುಂಬದವರ ಹೆಸರಿಗೆ ಖಾತೆ ಮಾಡುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜು ಬಳಿ 8.60 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ‘ಪ್ರಜಾಸೌಧ’ ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯಾದ್ಯಾದಂತ ದರಖಾಸ್ ಪೋಡಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸರ್ಕಾರದಿಂದ ಮಂಜೂರಾದ ಜಮೀನನ್ನು ಅನುಬಂಧ-1 ರಡಿ ಸರ್ವೆ ಮಾಡಲಾಗುತ್ತಿದೆ. ಮನೆ ಮನೆಗೆ ತೆರಳಿ ಮಾಹಿತಿ ಪಡೆದು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ 2344 ದರಖಾಸ್ ಪೋಡಿ ಅಭಿಯಾನಡಿ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ 1500 ಕ್ಕೂ ಹೆಚ್ಚು ಕಡತ ವಿಲೇವಾರಿ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಭೂ ಸುರಕ್ಷತೆ ಯೋಜನೆಯಡಿ ಕಡತಗಳು ಕಾಣೆಯಾಗದಂತೆ ಕ್ರಮವಹಿಸಲಾಗಿದೆ. ಮೂಲ ಕಡತಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಭೂಮಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಕಡತ ಕಾಣೆಯಾಗುವುದನ್ನು ತಪ್ಪಿಸಲು ಕ್ರಮವಹಿಸಲಾಗಿದೆ ಎಂದು ಸಚಿವರು ಹೇಳಿದರು. ರಾಜ್ಯದಲ್ಲಿ ಭೂಮಿಗೆ ಸಂಬಂಧಪಟ್ಟಂತೆ 50 ಕೋಟಿ ಪುಟಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ. ಇನ್ನೂ 50 ಕೋಟಿ ಪುಟ ಸ್ಕ್ಯಾನಿಂಗ್ ಮಾಡಲು ಬಾಕಿ ಇದೆ. ಎಲ್ಲಾ ದಾಖಲೆಗಳು ಆನ್ಲೈನ್ ಮೂಲಕ ಮೊಬೈಲ್ನಲ್ಲಿಯೇ ದೊರೆಯಲಿದೆ ಎಂದರು.
ರಾಜ್ಯದಲ್ಲಿರುವ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರಿಗೆ ಲ್ಯಾಪ್ಟಾಪ್ ವಿತರಿಸುವ ಕಾರ್ಯ ನಡೆದಿದ್ದು, ಕಾಗದ ರಹಿತವಾಗಿ ಇ-ಕಚೇರಿ ಮೂಲಕ ಸೌಲಭ್ಯಗಳನ್ನು ಒದಗಿಸಲು ಮುಂದಾಗಲಾಗಿದೆ ಎಂದು ಸಚಿವರು ಹೇಳಿದರು.ಇಲಾಖೆಯಲ್ಲಿ ಸಾರ್ವಜನಿಕರನ್ನು ಶತಾಯಿಸಬಾರದು. ಉತ್ತರಾಧಾಯಿತ್ವ ಹೊಂದಿರಬೇಕು. ಆ ನಿಟ್ಟಿನಲ್ಲಿ ಕಂದಾಯ ಇಲಾಖೆಯನ್ನು ಅಪ್ಡೇಟ್ ಮಾಡಲಾಗುತ್ತಿದೆ ಎಂದರು.
ತಹಶೀಲ್ದಾರರು ಮತ್ತು ಉಪ ವಿಭಾಗಾಧಿಕಾರಿ ಕೋರ್ಟ್ಗಳಲ್ಲಿ ವರ್ಷಾನುಗಟ್ಟಲೆ ಕಡತ ಬಾಕಿ ಇರುವುದನ್ನು ಗಮನಿಸಿ ಕಡತ ವಿಲೇವಾರಿಗೆ ಚುರುಕುಗೊಳಿಸಲಾಗಿದೆ ಎಂದರು.ತಹಶೀಲ್ದಾರರ ನ್ಯಾಯಾಲಯದಲ್ಲಿ ಇದ್ದ 10,774 ಪ್ರಕರಣಗಳಲ್ಲಿ 510 ಪ್ರಕರಣಗಳು ಮಾತ್ರ ಬಾಕಿ ಇದೆ ಎಂದು ಸಚಿವರು ತಿಳಿಸಿದರು.
ಹಾಗೆಯೇ ಉಪ ವಿಭಾಗಾಧಿಕಾರಿ ಕೋರ್ಟ್ನಲ್ಲಿ ನ್ಯಾಯಾಲಯದಲ್ಲಿ 6 ತಿಂಗಳಿಂದ ಕಡತಗಳನ್ನು ವಿಲೇವಾರಿ ಮಾಡಬೇಕಿದ್ದು, ಹಿಂದ 59,335 ಅರ್ಜಿಗಳು ವಿಲೇವಾರಿಗೆ ಬಾಕಿ ಇತ್ತು. ಈಗ 12,249 ಅರ್ಜಿಗಳು ಮಾತ್ರ ವಿಲೇವಾರಿಗೆ ಬಾಕಿ ಇದೆ ಎಂದು ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಕಳೆದ 5 ವರ್ಷದಲ್ಲಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ 32,787 ಪ್ರಕರಣಗಳು ಇದ್ದವು, ಈಗ 3,974 ಅರ್ಜಿಗಳು ಮಾತ್ರ ಬಾಕಿ ಇದೆ. ಮೂರು ತಿಂಗಳಲ್ಲಿ ವಿಲೇವಾರಿ ಮಾಡಬೇಕಿದೆ ಎಂದು ಸಚಿವರು ಹೇಳಿದರು.
ಭೂಕುಸಿತ ತಡೆಯುವ ಸಂಬಂಧ ಕಾಮಕಾರಿ ಕೈಗೊಳ್ಳಲು 50 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.
ಜಿಲ್ಲೆಯ 5 ತಾಲ್ಲೂಕಿಗೆ ತಹಶೀಲ್ದಾರ್ ನೇಮಕ ಮಾಡಲಾಗಿದೆ. ಗ್ರಾಮ ಆಡಳಿತ, ಸರ್ವೇ ಅವರನ್ನು ನೇಮಿಸಲಾಗಿದೆ. ಕೊಡಗು ಜಿಲ್ಲೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು.
ಪ್ರಜಾಸೌಧ ತಾಲ್ಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ಕಚೇರಿ, ಭೂ ದಾಖಲೆಗಳ ಕಚೇರಿ, ಉಪ ನೋಂದಾಣಾಧಿಕಾರಿ ಕಚೇರಿ, ಖಜಾನೆ, ಹೀಗೆ ಹಲವು ಇಲಾಖೆಗಳು ಇರಲಿವೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ಇಬ್ಬರು ಶಾಸಕದ್ವಯರು ಕ್ರೀಯಾಶೀಲವಾಗಿ ಜಿಲ್ಲೆಗೆ ಆಗಬೇಕಿರುವ ಕೆಲಸ ಸಂಬಂಧ ಗಮನ ಸೆಳೆದು ಕೆಲಸ ಮಾಡಿಸುತ್ತಾರೆ ಎಂದು ಕೃಷ್ಣಬೈರೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.








