ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರ ಸೇರಿದಂತೆ ಇತರರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್.ರವಿಕುಮಾರ್ ಟೆಲೆಕ್ಸ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು, ಉಪಾಧ್ಯಕ್ಷರಾಗಿ ಹೆಚ್ ಬಿ ಮದನ ಗೌಡ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಮತ್ತಿಕೆರೆ ಜಯರಾಮ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.

ಇನ್ನೂ ಕೆಯುಡಬ್ಲ್ಯೂಜೆಯ ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಜಿ ಸಿ, ಕಾರ್ಯದರ್ಶಿಯಾಗಿ ನಿಂಗಪ್ಪ ಚಾವಡಿ, ಪುಂಡಲೀಕ ಬಾಲೋಜಿ, ಸೋಮಶೇಖರ ಕೆರೆಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ವಾಸುದೇವ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಕೆಯುಡಬ್ಲ್ಯೂಜೆ ಮುಖ್ಯ ಚುನಾವಣಾಧಿಕಾರಿ ಎನ್ ರವಿಕುಮಾರ್ ಟೆಲೆಕ್ಸ್ ಘೋಷಿಸಿದ್ದಾರೆ.
ಶಿವಾನಂದ ತಗಡೂರ ಯಾರು?
ಬಾಗೂರು-ನವಿಲೆ ಸುರಂಗ ಸಂತ್ರಸ್ತರ ಪರವಾಗಿ ಹೋರಾಟ ಸಂಘಟಿಸಿದ್ದ ಅವರು, ಹಾಸನ ಜಿಲ್ಲಾ ನೀರಾವರಿ ಹೋರಾಟ ಸಮಿತಿಗಳ ಒಕ್ಕೂಟ, ರೈತ ಹಿತ ರಕ್ಷಣಾ ಸಮಿತಿ, ಹಾಸನ ಜಿಲ್ಲಾ ಸಾಕ್ಷರತಾ ಆಂದೋಲನ ಸಮಿತಿ ಸಂಚಾಲಕರಾಗಿ ದುಡಿದವರು. ಹಲವು ಜನಪರ ಚಳವಳಿಯಲ್ಲಿ ಮುಂದಾಳಾಗಿ ಗುರುತಿಸಿಕೊಳ್ಳುತ್ತಲೇ ಪತ್ರಕರ್ತರಾಗಿ ಮಾಗಿದವರು.
2004ರಲ್ಲಿ ಹಾಸನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷರಾಗಿದ್ದಾಗ ಸುಸಜ್ಜಿತ ಪತ್ರಕರ್ತರ ಭವನವನ್ನು ನಿರ್ಮಾಣ ಮಾಡಿದ್ದು ಅವರ ಕ್ರೀಯಾಶೀಲತೆಗೆ ಸಾಕ್ಷಿ. 2018ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕೆಯುಡಬ್ಲೂೃಜೆಗೆ ಹೆಜ್ಜೆ ಇಟ್ಟ ತಗಡೂರು, ಅಧ್ಯಕ್ಷರೊಬ್ಬರ ರಾಜೀನಾಮೆ ತರುವಾಯ ಆ ಸಂಘಟನೆಯ ಚುಕ್ಕಾಣಿ ಹಿಡಿದವರು.
ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರುಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ ನೆರವು ಕೊಡಿಸಿದ ಅವರ ಹೋರಾಟದ ಪರಿಯನ್ನು ಯಾರೂ ಮರೆಯುವಂತಿಲ್ಲ. ಬಹುರೂಪಿ ಪ್ರಕಾಶನ ಪ್ರಕಟಿಸಿರುವ ಕೋವಿಡ್ ಕಥೆಗಳು ಪುಸ್ತಕದಲ್ಲಿ ಪ್ರತಿ ಘಟನೆಗಳನ್ನು ತಗಡೂರು ದಾಖಲಿಸಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಮನೆಯಂಗಳಕ್ಕೆ ಕೆಯುಡಬ್ಲೂೃಜೆ ಎನ್ನುವ ಹೊಸ ಕಲ್ಪನೆಯೊಂದಿಗೆ ಹಿರಿಯ ಪತ್ರಕರ್ತರನ್ನು ಅವರ ಮನೆ ಅಂಗಳದಲ್ಲಿಯೇ ಗೌರವಿಸಿ, ಅವರ ಅನುಭವಗಳನ್ನು ದಾಖಲೀಕರಣ ಮಾಡಿದ್ದ್ದು ವಿಶೇಷ. ಅಷ್ಟೇ ಅಲ್ಲ, ಈ ಬಗ್ಗೆ ಅಮೃತ ಬೀಜ ಎನ್ನುವ ಪುಸ್ತಕವನ್ನು ಹೊರ ತಂದಿದ್ದಾರೆ.
ರಾಜ್ಯ ಪತ್ರಕರ್ತರ ಸಮ್ಮೇಳನಗಳಿಗೆ ಹೊಸ ರೂಪ ನೀಡಿದ್ದಲ್ಲದೆ, ಪತ್ರಕರ್ತರ ಕ್ಷೇಮ ನಿಧಿಯನ್ನು ಒಂದು ಕೋಟಿಗೆ ಹೆಚ್ಚಿಸಿದ್ದು ಸಾಧನೆ. ಹತ್ತು ಹಲವು ಕಾರ್ಯಕ್ರಮದ ಮೂಲಕ ಕೆಯುಡಬ್ಲೂೃಜೆಗೆ ಹೊಸ ಆಯಾಮ ನೀಡಿದ ತಗಡೂರು ಅವರು ಸತತ ಎರಡು ಬಾರಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ ಮತ್ತು ಅವರ ಸೇವೆಗೆ ಸಂದ ಗೌರವವಾಗಿದೆ.
ಶಿವಾನಂದ ತಗಡೂರು ಇದ್ದರೆ ಆನಂದ: ಹಿರಿಯ ಪತ್ರಕರ್ತ ಜಿಎನ್ ಮೋಹನ್
ಶಿವಾನಂದ ತಗಡೂರು ಅವರು ಎರಡನೆಯ ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ರಾಜ್ಯದ ಹಲವು ಮನೆಗಳಲ್ಲಿ ಸಮಾಧಾನದ ನಿಟ್ಟುಸಿರು ಹೊರಬಿದ್ದಿದೆ. ಅನೇಕ ಅಮ್ಮಂದಿರ ಕಣ್ಣಲ್ಲಿ ಸಂತೋಷದ ನೀರು ಜಿನುಗಿದೆ. ಎಷ್ಟೋ ಕುಟುಂಬಗಳು ಸಂತಸದ ಚಪ್ಪಾಳೆ ತಟ್ಟಿವೆ.
‘ಹೀಗೂ ಉಂಟೇ! ಒಂದು ಸಂಘದ ಅಧ್ಯಕ್ಷರಾಗಿದ್ದಕ್ಕೆ ರಾಜ್ಯದ ಎಲ್ಲೆಲ್ಲೋ ಸಂಭ್ರಮ ಮನೆ ಮಾಡುತ್ತದೆಯೇ’ ಎಂದು ಯಾರಾದರೂ ಕೇಳಿದರೆ ಆವರು ಶಿವಾನಂದ ತಗಡೂರು ಅವರ ‘ಕೋವಿಡ್ ಕಥೆಗಳು’ ಹಾಗೂ ‘ಮಾಧ್ಯಮ ಲೋಕದ ಅಮೃತ ಬೀಜ’ ಕೃತಿಗಳನ್ನು ಓದಿಲ್ಲ ಎಂದರ್ಥ.
ಗುಬ್ಬಿಯ ಪ್ರಜಾವಾಣಿ ಪತ್ರಕರ್ತ ಜಯಣ್ಣ, ಕೆ ಆರ್ ಪೇಟೆಯ ಕನ್ನಡಪ್ರಭ ಪತ್ರಿಕೆಯ ಸಿಂಕ ಸುರೇಶ್, ಮೈಸೂರಿನ ಪ್ರಜಾವಾಣಿಯ ಪವನ್ ಹೆತ್ತೂರು, ಟಿವಿ 9 ನ ನಾಗರಾಜ ದೀಕ್ಷಿತ್, ಪಾವಗಡದ ದವಡಬೆಟ್ಟ ನಾಗರಾಜ್, ಚಾಮರಾಜನಗರದ ರೇಷ್ಮೆ ನಾಡು ಪತ್ರಿಕೆಯ ಸದಾಶಿವ ಗಟ್ಟವಾಡಿಪುರ, ಮಂಗಳೂರಿನ ವಿಜಯಕರ್ನಾಟಕದ ಸೀತಾಲಕ್ಷ್ಮಿ ಕರ್ಕಿಕೋಡಿ, ಬೋಧಿವೃಕ್ಷದ ಗೌರೀಪುರ ಚಂದ್ರು, ಸಂಜೆವಾಣಿಯ ಕೆ ಹಾಲಪ್ಪ, ಸುಳ್ಯದ ಸುದ್ದಿ ಬಿಡುಗಡೆಯ ನಾರಾಯಣ ನಾಯಕ್, ಕಡಬದ ಕೆ ಖಾದರ್.. ಹೀಗೆ ಅಸಂಖ್ಯಾತ ಪತ್ರಕರ್ತರ ಮನೆಗಳಲ್ಲಿ ಇವತ್ತು ಒಂದಿಷ್ಟಾದರೂ ಬೆಳಕಿದ್ದರೆ ಅದು ಶಿವಾನಂದ ತಗಡೂರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದಾಗಿ.
ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಕೇಳಿಡ ತಕ್ಷಣವೇ ಕುಸಿದು ಸಾವನ್ನಪ್ಪಿದವರು, ಆಸ್ಪತ್ರೆ ಬಿಲ್ ಪಾವತಿಸಲು ತಾಳಿ ಆಡ ಇಟ್ಟವರು, ಮದುವೆಯಾಗಿ 11 ದಿನಕ್ಕೆ ಗಂಡನನ್ನು ಕಳೆದುಕೊಂಡಾಕೆ, ಹುಟ್ಟುಹಬ್ಬದಂದೇ ಸಾವನ್ನಪ್ಪಿದವರು… ಹೀಗೆ ಸಾವುಗಳು ಬಂದು ಎರಗುತ್ತಿದ್ದಾಗ ‘ಮನೆ ಮನೆಯೂ ಕತ್ತಲೆ, ಪ್ರತಿ ಕಣ್ಣು ಕಣ್ಣೀರು’ ಎಂದು ತಗಡೂರು ಅವರಿಗೆ ಅರ್ಥವಾಗಿ ಹೋಯಿತು. ಕಚೇರಿಯಲ್ಲಿ, ಮನೆಯಲ್ಲಿ, ಪತ್ರಕರ್ತರ ಸಂಘದಲ್ಲೂ ‘ಕೋವಿಡ್ ಇದೆ ಸಾರ್ ಹೊರಹೋಗಬೇಡಿ’ ಎಂದು ಒತ್ತಾಯ ಮಾಡಿದರೂ ಅವರು ಎಲ್ಲರ ಮನೆಗಳತ್ತ ಹೊರಟೇಬಿಟ್ಟರು. ಪರಿಣಾಮ ಶಿವಾನಂದ್ ಅವರಿಗೂ ಕೋವಿಡ್ ತಗುಲಿತು. ಚೇತರಿಸಿಕೊಂಡವರೇ ಪ್ರತಿಯೊಬ್ಬರ ಚಿಕಿತ್ಸೆಯ ಫೈಲ್ ಗಳನ್ನು ಹಿಡಿದು ಮುಖ್ಯಮಂತ್ರಿಗಳಿಂದ ಪರಿಹಾರ ಕೊಡಿಸಿದರು. ಒಂದು ಆಸ್ಪತ್ರೆ ಐದು ಪಟ್ಟು ವಸೂಲು ಮಾಡಿದಾಗ ಬಿಡದೆ ಆ ಎಲ್ಲಾ ಹಣವನ್ನು ಆಸ್ಪತ್ರೆಯವರು ಹಿಂದಿರುಗಿಸುವಂತೆ ನೋಡಿಕೊಂಡರು. ಮನೆ ಮಂಜೂರು ಮಾಡಿಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಹಾಗೂ ಶಿವಾನಂದ ತಗಡೂರು ಅವರಿಗೆ ಮೊನ್ನೆ ಸನ್ಮಾನ ಕಾರ್ಯಕ್ರಮವಿತ್ತು. ನಾನು ಮಾತನಾಡುತ್ತಾ ‘ನಿಮ್ಮಿಬ್ಬರ ತಾಳ್ಮೆಯ ಪಾಸ್ ವರ್ಡ್ ಯಾವುದು ಹೇಳಿ’ ಎಂದು ತಾಕೀತು ಮಾಡಿದ್ದೆ.
ಶಿವಾನಂದ ತಗಡೂರು ಅವರೊಳಗೆ ಒಂದು ತಾಳ್ಮೆಯ ಶಿಖರವೇ ಇದೆಯೇನೋ. ಇಡೀ ರಾಜ್ಯ ಸುತ್ತುತ್ತಾ, ಪತ್ರಕರ್ತರ ಸಮಸ್ಯೆ, ಜೊತೆಗೆ ಪತ್ರಕರ್ತರ ಸಂಘಗಳು ತಂದೊಡ್ಡುವ ಸಮಸ್ಯೆಯನ್ನೂ ಬಗೆಹರಿಸುತ್ತಾ, ಅವರು ತಿರುಗುವ ಪರಿ ವಿಸ್ಮಯ ಮೂಡಿಸುತ್ತದೆ.
ಅಷ್ಟು ತಾಳ್ಮೆಯ ಶಿವಾನಂದ ಅವರಲ್ಲೂ ಸಹಾ ಒಬ್ಬ ‘ಅಶಾಂತ ಸಂತ’ನಿದ್ದಾನೆ ಎಂದು ರಾಜ್ಯಕ್ಕೆ ಗೊತ್ತಾದದ್ದು ಅವರು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿಯೇ. ಬಾಗೂರು-ನವಿಲೆ ಸುರಂಗದ ವಿರುದ್ಧದ ಹೋರಾಟಕ್ಕೆ ನೇತೃತ್ವ ಕೊಟ್ಟವರಲ್ಲಿ ಶಿವಾನಂದ ಅವರೂ ಮುಖ್ಯರು. ಹಾಸನದ ಬೀದಿಗಳಲ್ಲಿ ಜರುಗುತ್ತಿದ್ದ ಎಲ್ಲಾ ಸಮಾಜಮುಖಿ ಹೋರಾಟಗಳಲ್ಲಿ ಒಂದು ಪರಿಚಿತ ಮುಖ ಇದ್ದರೆ ಅದು ಶಿವಾನಂದ ಅವರದ್ದು.
ಬುಕರ್ ಪ್ರಶಸ್ತಿ ಸ್ವೀಕರಿಸಿದ ಭಾನು ಮುಷ್ತಾಕ್ ಅವರು ವಿದೇಶದಿಂದ ನೇರವಾಗಿ ಕಾಲಿಟ್ಟದ್ದು ಶಿವಾನಂದ್ ಅವರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ. ಅದರ ಹಿಂದೆ ದಶಕಗಳ ನಂಟಿದೆ. ಭಾನು ಅವರಿಗೆ ಧರ್ಮಾಂಧರು ಕಿರುಕುಳ ಕೊಟ್ಟಾಗ ಭಾನು ಅವರಿಗೆ ಬೆಂಬಲವಾಗಿ ನಿಂತವರಲ್ಲಿ ಶಿವಾನಂದ್ ಸಹಾ ಮುಖ್ಯರು.
ನನಗೆ ಶಿವಾನಂದ ಅವರ ಜೊತೆ ಒಂದಿಷ್ಟು ಹೆಚ್ಚೇ ಸಲಿಗೆ ಇರಲು ಇನ್ನೊಂದು ಕಾರಣ ಅವರು ರಂಗಭೂಮಿಯ ಹಿನ್ನೆಲೆಯವರು ಎನ್ನುವುದು. ಹಾಸನದಲ್ಲಿ ‘ರಂಗಸಿರಿ’ ತಂಡವನ್ನು ಸ್ಥಾಪಿಸಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ, ಉತ್ಸವಗಳನ್ನು ಸಂಘಟಿಸಿದ ಕೀರ್ತಿ ಇವರದ್ದು.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದಾಗ ಶಿವಾನಂದ ಹೊಸ ಯೋಜನೆಯೊಂದಗೆ ಬಂದರು. 75 ತುಂಬಿದ ಪತ್ರಕರ್ತರನ್ನು ಅವರ ಮನೆಯ ಅಂಗಳದಲ್ಲಿಯೇ ಸನ್ಮಾನಿಸಬೇಕು ಎನ್ನುವುದು. ಹಾಗೆ ಹಿರಿಯರೊಬ್ಬರ ಮನೆಗೆ ಹೋಗಿ ಇನ್ನೇನು ಹಿಂದಿರುಗಬೇಕು ಎನ್ನುವಾಗ ಆ ಹಿರಿಯರ ಕಣ್ಣಲ್ಲಿ ಇನ್ನಿಲ್ಲದಂತೆ ನೀರು ಹರಿಯುತ್ತಿತ್ತು.
ಶಿವಾನಂದ ತಗಡೂರು ಅವರ ಕೈಯನ್ನು ಹಿಡಿದು ಅವರು ಹೇಳುತ್ತಿದ್ದರು- ನನಗೂ ಒಂದು ಮರ್ಯಾದೆ ಬಂದಿದ್ದು ಇವತ್ತೇ ಅಂತ. ನಾನು ಬೆಳಗ್ಗೆ ಕಚೇರಿಗೆ ಹೋದರೆ ನಡುರಾತ್ರಿಯಲ್ಲಿ ಮನೆಗೆ ಬರುತ್ತಿದ್ದೆ. ಕಚೇರಿಯಲ್ಲಿ ನನಗೆ ಏನೇ ಒಳ್ಳೆಯ ಹೆಸರಿದ್ದರೂ ಮನೆಯವರಿಗೆ ಅದು ಗೊತ್ತಿರಲಿಲ್ಲ. ಜವಾಬ್ದಾರಿ ಇಲ್ಲದವನಂತೆಯೇ ನೋಡಿದ್ದರು. ಇವತ್ತು ನೀವೆಲ್ಲರೂ ಬಂದು ಸನ್ಮಾನ ಮಾಡಿ ನನ್ನ ಕೊಡುಗೆಯ ಬಗ್ಗೆ ಮಾತನಾಡಿದಾಗಲೇ ಮನೆಯವರಿಗೆ ನಾನು ಏನು ಎಂದು ಅರಿವಾದದ್ದು ಎಂದರು.
ಹಿಂದಿರುಗಿ ನೋಡಿದರೆ ಮನೆಯ ಎಲ್ಲರ ಕಣ್ಣಲ್ಲೂ ನೀರು. ಶಿವಾನಂದ ತಗಡೂರು ಅವರಿಗೆ ಶುಭವಾಗಲಿ. ಪತ್ರಕರ್ತರ ಬದುಕು ಸಹನೀಯವಾಗಲಿ ಎಂಬುದಾಗಿ ಹಿರಿಯ ಪತ್ರಕರ್ತ ಜಿಎನ್ ಮೋಹನ್ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಶಿವಾನಂದ ತಗಡೂರ ಬಗ್ಗೆ ಬರೆದಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








