ಬೆಂಗಳೂರು: ಚುನಾವಣಾ ಅಕ್ರಮದ ತನಿಖೆಗೆ ಪೂರಕ ದಾಖಲೆ ನೀಡಿ ಎಂದು ಮಾಹಿತಿ ಕೇಳಿದರೆ, ಆಯೋಗವೇ ನಮ್ಮ ಬಳಿ ಸಾಕ್ಷಿ ಕೇಳುತ್ತಿದೆ. ಹೀಗಾಗಿ ಪಾಲಿಕೆ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಚಿಂತನೆ ನಡೆಸಿದ್ದೇವೆ. ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಎಐಸಿಸಿ ಅವರು ತಿಳಿಸಿದ್ದು, ಇದರ ಯಶಸ್ಸು ಬಿಎಲ್ಎಗಳು, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳದ್ದಾಗಿದೆ. ಈ ಹೋರಾಟ ಹಮ್ಮಿಕೊಂಡಿರುವ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಅಭಿನಂದಿಸುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
“ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದಾದ್ಯಂತ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿ, ಮತದಾನದ ಹಕ್ಕು ಕಾಪಾಡಲು ಸಹಿ ಸಂಗ್ರಹದ ಮೂಲಕ ಬೃಹತ್ ಆಂದೋಲನ ನಡೆಸಲಾಗುತ್ತಿದೆ. ಮಹದೇವಪುರ ವಿಧಾನಸಭೆ ಕ್ಷೇತ್ರದ ಮತದಾನದ ಅಧ್ಯಯನ ಮಾಡಿ ಅಲ್ಲಿ ನಡೆದಿರುವ 1 ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಒಂದೇ ಮನೆಯಲ್ಲಿ 80ಕ್ಕೂ ಹೆಚ್ಚು ಮತಗಳನ್ನು ಸೇರಿಸಲಾಗಿತ್ತು. ಒಂದು ಬಾರ್ ನಲ್ಲಿ 70-80 ಮತದಾರರಿರುವುದನ್ನು ದಾಖಲೆ ಸಮೇತ ಬಹಿರಂಗ ಪಡಿಸಿ ರಾಹುಲ್ ಗಾಂಧಿ ಅವರು ದೇಶದ ಗಮನ ಸೆಳೆದಿದ್ದಾರೆ” ಎಂದು ತಿಳಿಸಿದರು.
“ಈ ಅಕ್ರಮದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು ಈ ಅಕ್ರಮದ ಬಗ್ಗೆ ಬೆಳಕು ಚೆಲ್ಲಿ ಇಲ್ಲಿಂದ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದರು. ಈ ಅಕ್ರಮ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಗಾಂಧಿ ನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಿವೆ. ಒಂದು ಕ್ಷೇತ್ರದಲ್ಲಿ ಇರುವ ಮತದಾರರ ಸಂಖ್ಯೆ ಅಷ್ಟೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದ ವರ್ಗದ ಕುಟುಂಬಗಳ ಸದಸ್ಯರ ಮತವನ್ನು ಬೇರೆ ಬೇರೆ ಬೂತ್ ಗಳಿಗೆ ಹಾಕಿ ವರ್ಗಾವಣೆ ಮಾಡಿರುವ ಷಡ್ಯಂತ್ರ ಬಯಲಾಗಿದೆ” ಎಂದು ವಿವರಿಸಿದರು.








