ಬೆಳಗಾವಿ : ಕಳೆದ 9 ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಪ್ರತಿ ಟನ್ ಕಬ್ಬಿಗೆ ದರ ಹೆಚ್ಚಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ರಾಜ್ಯ ಸರ್ಕಾರವು ಟನ್ ಕಬ್ಬಿಗೆ 3,300 ರೂ. ಬೆಲೆ ನಿಗದಿ ಮಾಡಿ ಆದೇಶ ಹೊರಡಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ರೈತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಕಬ್ಬಿಗೆ ಬೆಲೆ ಹೆಚ್ಚಳ ಘೋಷಣೆ ಮಾಡುವಂತೆ ಆಗ್ರಹಿಸಿ ಗುರ್ಲಾಪುರ ಗ್ರಾಮ ಸೇರಿದಂತೆ ಬೆಳಗಾವಿ ಜಿಲ್ಲೆ ಸೇರಿದಂತೆ ಹಲವೆಡೆ ಕಳೆದ ಒಂಭತ್ತು ದಿನಗಳಿಂದ ಕಬ್ಬು ಹೋರಾಟಗಾರರು ಹೋರಾಟ ನಡೆಸುತ್ತಿದ್ದರು. ರೈತರ ಈ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, 11.25 ರಿಕವರಿ ದರಕ್ಕೆ ಪ್ರತಿ ಟನ್ಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತಾಗಿ 3,300 ರೂ. ಕೊಡಲು ತೀರ್ಮಾನಿಸಲಾಗಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 81 ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡಿದ್ದೇನೆ. ಕೇಂದ್ರ ಸರ್ಕಾರ ಹಾರ್ವೆಸ್ಟಿಂಗ್ ಮತ್ತು ಸಾಗಾಟ ವೆಚ್ಚ ಸೇರಿಸಿ 11.25 ರಿಕವರಿ ದರಕ್ಕೆ ಪ್ರತಿ ಟನ್ಗೆ 3,550 ರೂ. ನಿಗದಿ ಮಾಡಿದೆ. ಇತ್ತ ರಾಜ್ಯ ಸಕ್ಕರೆ ಕಾರ್ಖಾನೆಗಳ ಮಾಲೀಕರು 11.25 ರಿಕವರಿ ದರಕ್ಕೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತುಪಡಿಸಿ 3,200 ರೂ. ಕೊಡಲು ಒಪ್ಪಿದ್ದರು.ಆದರೆ, ರೈತರು ಅದಕ್ಕೆ ಒಪ್ಪಿರಲಿಲ್ಲ. ರೈತರು ಪ್ರತಿ ಟನ್ಗೆ 3,500 ರೂ. ನೀಡಲು ಒತ್ತಾಯಿಸಿದ್ದರು. ಇಂದು ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಟನ್ 50 ರೂ. ಮತ್ತು ಸರ್ಕಾರದಿಂದ ಪ್ರತಿ ಟನ್ಗೆ 50 ರೂ. ನಂತೆ ಹೆಚ್ಚುವರಿಯಾಗಿ ಪ್ರತಿ ಟನ್ 100 ರೂ. ಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಆ ಮೂಲಕ 11.25 ರಿಕವರಿ ದರಕ್ಕೆ ಪ್ರತಿ ಟನ್ಗೆ ಸಾಗಾಟ ಹಾಗೂ ಕಟಾವು ವೆಚ್ಚ ಹೊರತಾಗಿ 3,300 ರೂ. ಕೊಡಲು ತೀರ್ಮಾನಿಸಲಾಗಿದೆ. ಈ ವರ್ಷ ಸುಮಾರು 6 ಕೋಟಿಗೂ ಅಧಿಕ ಮೆ.ಟನ್ ಶುಗರ್ ಉತ್ಪಾದನೆ ಆಗುವ ನಿರೀಕ್ಷೆ ಇದೆ. ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರಿಕವರಿ ದರ ಇದೆ. 11.25% ರಿಕವರಿ ದರಕ್ಕೆ 50 ರೂ. ಶುಗರ್ ಫ್ಯಾಕ್ಟರಿ ಹಾಗೂ 50 ರೂ. ಸರ್ಕಾರದ ವತಿಯಿಂದ ಒಟ್ಟು 100 ರೂ. ಹೆಚ್ಚುವರಿಯಂತೆ ಪ್ರತಿ ಟನ್ 3,300 ರೂ. ನೀಡಲು ತೀರ್ಮಾನಿಸಲಾಗಿದೆ. ಅದೇ ರೀತಿ 10.25 ರಿಕವರಿ ದರಕ್ಕೆ 3,200 ರೂ. ನೀಡಲು ತೀರ್ಮಾನಿಸಲಾಗಿದೆ. ಈ ಮುಂಚೆ ಒಪ್ಪಿತ ಆಫ್ಆರ್ಪಿ ಬೆಲೆ ಮೇಲೆ ರಾಜ್ಯಾದ್ಯಂತ ರಿಕವರಿ ದರ ಅನುಗುಣವಾಗಿ ಪ್ರತಿ ಟನ್ 100 ರೂ. ಹೆಚ್ಚುವರಿ ಹಣ ನೀಡಲಾಗುವುದು ಎಂದು ತಿಳಿಸಿದ್ದಾರೆ.








