ಬೆಂಗಳೂರು : ಒಂದೆಡೆ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೇಳಿ ಬರುತ್ತಿದ್ದು ಮತ್ತೊಂದು ಕಡೆ ಸಂಪುಟ ಪುನರಚನೆ, ಕುರಿತು ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯ ಬಿಜೆಪಿ ಶಾಸಕ ಸುನಿಲ್ ಕುಮಾರ್ ಜನವರಿ ಹೊತ್ತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪಥನವಾಗಲಿದ್ದು ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳಲಿದೆ ಎಂದು ಸ್ಪೋಟಕವಾದ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಕಾಲ ಹರಣ ಮಾಡಿದ್ದು, ಪಕ್ಷದವರೇ ನವೆಂಬರ್ ಕ್ರಾಂತಿ ಎನ್ನುವುದನ್ನು ಹುಟ್ಟುಹಾಕಿ ಚರ್ಚೆ ಮಾಡುತ್ತಿದ್ದಾರೆ. ನಾಯಕರು ಸಿಎಂ ಯಾರಾಗಬೇಕು ಎನ್ನುವ ಗೊಂದಲದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಶಾಸಕರು ಪ್ರತ್ಯೇಕವಾಗಿ ಸಭೆ ಮಾಡುತ್ತಿದ್ದು, ಜನವರಿ ಹೊತ್ತಿಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಹಾಗಾಗಿ ಮಧ್ಯಂತರ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ರಾಜ್ಯದ ಜನರು ಈ ಹಿಂದೆಯೇ ಕಬ್ಬು ಬೆಳೆಗೆ ನಿರ್ದಿಷ್ಟ ಬೆಲೆ ನಿಗದಿಗೆ ಒತ್ತಾಯಿಸಿದ್ದರು. ಕಳೆದ 8 ದಿನಗಳಿಂದ ರೈತರು ರಸ್ತೆಯಲ್ಲಿದ್ದಾರೆ. ಆದರೆ, ಸರ್ಕಾರ ಕಾರ್ಖಾನೆ ಮಾಲೀಕರ ಕರೆದು ಮಾತನಾಡುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ರೈತರು, ಕಾರ್ಮಿಕರು ಹಾಗೂ ಅಭಿವೃದ್ಧಿ ಮುಖ್ಯವಲ್ಲ. ಅವರಿಗೆ ಕೇವಲ ಯಾರು ಸಿಎಂ ಆಗುತ್ತಾರೆ? ಯಾರು ಮಂತ್ರಿಮಂಡಲ ಸೇರಬೇಕು? ಎನ್ನುವ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಜನ ಕಾಂಗ್ರೆಸ್‌ಗೆ ಬಹುಮತ ಕೊಟ್ಟಾಗ ಒಳ್ಳೆಯ ಆಡಳಿತ ನಿರೀಕ್ಷಿಸಿದ್ದರು. ಆದರೆ, ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿ ವಿಚಾರ ಇಟ್ಟುಕೊಂಡು ದೆಹಲಿಗೆ ಹೋಗುತ್ತಿಲ್ಲ. ಬದಲಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಾಗೂ ಮತ್ತೊಬ್ಬರ ಕುರ್ಚಿ ಎಳೆಯಲು ಹೋಗುತ್ತಿದ್ದಾರೆ. ಈ ಸರ್ಕಾರ ಯಾವಾಗ ಕುಸಿದು ಬೀಳಲಿದೆ ಎಂದು ಜನರು ಕೂಡ ಕಾದು ನೋಡುತ್ತಿದ್ದಾರೆ ಎಂದು ಟೀಕಿಸಿದರು.








