ಬೆಂಗಳೂರು : ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರ ‘ಜನಗಣಮನ’ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ’ ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರು ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ. ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದರಿಂದ ದೇಶದ್ರೋಹ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು ‘ಜನಗಣಮನ’ ಗೀತೆಯನ್ನು ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದು ಎಂಬ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ದೂರು ನೀಡಲಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ನವರಿಗೆ ತಮ್ಮ ಇತಿಹಾಸ ಗೊತ್ತಿಲ್ಲ. ಆರ್ಗನೈಸರ್ ಮ್ಯಾಗಜೀನ್ ಲೇಖನಗಳನ್ನು ಓದಿ ನೋಡಿ, ನೀವು ಎಂತಹ ದೇಶದ್ರೋಹಿಗಳೇ ಎಂದು ತಿಳಿಯುತ್ತದೆ. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ನೀವು ಯಾವತ್ತೂ ಗೌರವ ಕೊಟ್ಟಿಲ್ಲ ಎಂದು ವಾಗ್ದಾಳಿ ನಡಿಸಿದ್ದಾರೆ.
ಇದು ‘ಜನಗಣಮನ’ ಬ್ರಿಟಿಷರನ್ನ ಸ್ವಾಗತಿಸುವುದಕ್ಕೆ ರಚಿಸಿದ್ದು ಎಂದು ಹೇಳ್ತಾರಲ್ಲ, ಇದು ಅವರು ಸೃಷ್ಟಿಸಿದಂತ ಇತಿಹಾಸ. ರವೀಂದ್ರನಾಥ್ ಠಾಕೂರ್ ಅವರು 1937-39 ರಲ್ಲೇ ಇದ್ರ ಬಗ್ಗೆ ಹೇಳಿದ್ರು ಇದು ನಮ್ಮ ದೇಶಕ್ಕಾಗಿ ಬರೆದಿರುವ ಗೀತೆ.ಕೇಶವಕೃಪ ಹಾಗೂ ಶಾಖೆಗಳಲ್ಲಿ ನಡೆಸಿರುವ ಸುಳ್ಳನ್ನೇ ಇವರು ಇತಿಹಾಸ ಅಂದುಕೊಂಡಿದ್ದಾರೆ. ನಾವು ಇಲ್ಲಿಯವರೆಗೆ ಕೇಳಿರುವ ಪ್ರಶ್ನೆಗಳು ಅವರ ಮ್ಯಾಗಜೀನ್ ನಲ್ಲೇ ಬಂದಿದೆ. ಹಿರಿಯರ ಲೇಖನಗಳನ್ನ ಓದಿ ನಿಮಗೆ ಗೊತ್ತಾಗುತ್ತೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಾ ಇತಿಹಾಸದಲ್ಲಿ ಅಂತ ನಿಮಗೇ ನಾಚಿಕೆ ಆಗುತ್ತೆ ಎಂದು ಕಿಡಿಕಾರಿದರು.








