ಧಾರವಾಡ : ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕಡ್ಡಾಯಕ್ಕೆ ಇತ್ತೀಚೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಆದೇಶವನ್ನು ಕಾಯ್ದಿರಿಸಿದೆ.
ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ತೆರವುಗೊಳಿಸುವಂತೆ ರಾಜ್ಯ ಸರ್ಕಾರವು ದ್ವಿದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ಗೀತಾ ಕೆ.ಬಿ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಈ ಕುರಿತು ಇಂದು ವಿಚಾರಣೆ ನಡೆಯಿತು. ಸುಮಾರು ಒಂದು ಗಂಟೆ ಕಾಲ ನಡೆದ ವಾದ ಪ್ರತಿವಾದದ ಬಳಿಕ ತೀರ್ಪು ಕಾಯ್ದಿರಿಸಿ ಪೀಠ ಆದೇಶಿಸಿದೆ.
ಸರ್ಕಾರಿ ರಸ್ತೆ ಇರುವುದು ಸಾರ್ವಜನಿಕರ ಓಡಾಟಕ್ಕೆ. ಹೀಗಾಗಿ ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು. ಖಾಸಗಿಯವರು ಕಾರ್ಯಕ್ರಮ ಮಾಡಲು ಬೇರೆ ಕಡೆ ಸ್ಥಳ ಬಾಡಿಗೆ ಪಡೆದು ಕಾರ್ಯಕ್ರಮ ಮಾಡಬಹುದು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಇದರಲ್ಲಿ ಕಾಯ್ದೆ 19ಎ ಉಲ್ಲಂಘನೆಯಾಗಲ್ಲ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದರು.
ಸರ್ಕಾರಿ ವಕೀಲರ ವಾದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರದ ಆದೇಶ ಸರಿಯಾದುದಲ್ಲ. ಸರ್ಕಾರಿ ಜಾಗ ಇರುವುದೇ ಸಾರ್ವಜನಿಕರಿಗೋಸ್ಕರ. ಅಲ್ಲಿ ಈ ರೀತಿ ಅಡ್ಡಿಪಡಿಸೋದು ನ್ಯಾಯ ಸಮ್ಮತವಲ್ಲ, ಇದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ. ಪಾರ್ಕುಗಳು ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿ ಇರುತ್ತವೆ. ಅವುಗಳಿಗೆ ನಿರ್ಬಂಧ ಹೇರುವುದು ಸಾರ್ವಜನಿಕರ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ತೀರ್ಪು ಕಾಯ್ದಿರಿಸಿದೆ.








