ಬೆಂಗಳೂರು : ರಾಜ್ಯದಲ್ಲಿ ನವೆಂಬರ್ ತಿಂಗಳನ್ನು ಮಕ್ಕಳ ಮಾಸ ಎಂದು ಘೋಷಿಸುವ ಕುರಿತು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತೀ ವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ, ಆ ದಿನ ಮಕ್ಕಳ ಕುರಿತು ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯಗಳು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಗರ್ಭಧಾರಣೆ ಪ್ರಕರಣಗಳು, ಪೋಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ನವೆಂಬರ್ ತಿಂಗಳನ್ನು ಮಕ್ಕಳ ಮಾಸ ಎಂದು ಘೋಷಿಸಿ ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಆದ್ಯತೆ ವಹಿಸುವುದು ತುರ್ತು ಅಗತ್ಯ ವಾಗಿದೆ.
ಆದ್ದರಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆಗಳು, ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನ, ಬಾಲಕಾರ್ಮಿಕರು ಹಾಗೂ ಶಾಲೆ ಬಿಟ್ಟ ಮಕ್ಕಳ ಗುರುತಿಸುವಿಕೆ ಮತ್ತು ರಕ್ಷಣೆ ಮಕ್ಕಳ ರಕ್ಷಣಾ ಬಲವರ್ಧನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ 2016 ಮತ್ತು ತೆರೆದ ಮನೆ ಕಾರ್ಯಕ್ರಮದ ಅನುಷ್ಠಾನ, ಅನಾಥ ಹಾಗೂ ಸಂಕಷ್ಟದಲ್ಲಿನ ಮಕ್‌ಕಳ ಗುರುತಿಸುವಿಕೆ, ಮಕ್ಕಳ ಸಹಾಯವಾಣಿ ಹಾಗೂ ದತ್ತು ಕಾರ್ಯಕ್ರಮದ ಪ್ರಚಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಇಡೀ ನವೆಂಬರ್ ತಿಂಗಳು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಅನುಷ್ಠಾನ ಮಾಡುವ ಮೂಲಕ ಸಮಾಜದಲ್ಲಿ ವ್ಯಾಪಕವಾದ ಜಾಗೃತಿ ಮೂಡಿ ಮಕ್ಕಳ ಹಕ್ಕುಗಳ ರಕ್ಷಣೆಗೆ ವೇಗ ದೊರೆಯಲಿದೆ.
ಆದ್ದರಿಂದ ನವೆಂಬರ್ ತಿಂಗಳನ್ನು ಮಕ್ಕಳ ಮಾಸವೆಂದು ಘೋಷಿಸಿ ಆಚರಿಸಿ, ವರದಿಯನ್ನು ಕೇಂದ್ರ ಕಛೇರಿಗೆ ನೀಡಲು ಈ ಮೂಲಕ ಸೂಚಿಸಿದೆ.









