ಬೆಂಗಳೂರು : ಧರ್ಮಸ್ಥಳ ತಲೆಬುರುಡೆ ಕೇಸ್ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ್ ಗೌಡಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಧರ್ಮಸ್ಥಳದ ಠಾಣೆಯ FIR 39/2025 ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪರ-ವಿರೋಧ ವಾದ ಆಲಿಸಿ ಪ್ರಕರಣದ ತನಿಖೆಗೆ ನ.12ರವರೆಗೆ ತಡೆ ನೀಡಿ ಆದೇಶಿಸಿದದೆ.
ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಅರ್ಜಿದಾರರ ಪರವಾಗಿ ವಕೀಲ ಬಾಲನ್ ವಾದ ಮಂಡಿಸಿದರು. 9 ಬಾರಿ ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಎಫ್ಐಆರ್ ನಲ್ಲಿ ನಮ್ಮನ್ನು ಆರೋಪಿಗಳು ಎಂದು ಉಲ್ಲೇಖಿಸಿಲ್ಲ. ಖುದ್ದಾಗಿ ನೋಟಿಸ್ ಜಾರಿ ಮಾಡದೆ ವಾಟ್ಸಾಪ್ ಮತ್ತು ಇ-ಮೇಲ್ ನಲ್ಲಿ ನೋಟಿಸ್ ನೀಡಿದ್ದಾರೆ. ಬಿಎನ್ಎಸ್ ಸೆಕ್ಷನ್ 35 (3) ಅಡಿಯಲ್ಲಿ ಸಮನ್ಸ್ ನೀಡಿದ್ದಾರೆ.
ಎಸ್ಐಟಿ ನೀಡಿರುವುದು ಕಾನೂನು ಬಾಹಿರ. ನಾವು ಆರೋಪಿಗಳು ಅಲ್ಲ ಸಾಕ್ಷಿಗಳು ಅಲ್ಲ. ರಾಜಕೀಯ, ಧಾರ್ಮಿಕ, ಸಂಘಟನಾತ್ಮಕ ವೈರತ್ವದಿಂದ ನೋಟಿಸ್ ನೀಡಿದ್ದಾರೆ. ಈಗ 10ನೇ ನೋಟಿಸ್ ನೀಡಿ ಬೆಳಗ್ಗೆಯಿಂದ ಮಧ್ಯರಾತ್ರಿ ಅವರಿಗೆ ಕೂರಿಸುತ್ತಾರೆ. ಈಗಾಗಲೇ 150 ಗಂಟೆಗೂ ಹೆಚ್ಚು ಕಾಲ ನಮ್ಮನ್ನು ವಿಚಾರಣೆ ನಡೆಸಿದ್ದಾರೆ ಎಂದು ವಾದಿಸಿದರು.
ಆರಂಭದಲ್ಲಿ 251 (a) fir ಹಾಕಿ ಬಳಿಕ ಬೇರೆ ಸೆಕ್ಷನ್ ಸೇರಿಸಿದ್ದಾರೆ. ಎರಡುವರೆ ತಿಂಗಳ ನಂತರ ಹೊಸ ಸೆಕ್ಷನ್ ಗಳನ್ನು ಸೇರಿಸಿದ್ದಾರೆ. ಈ ವೇಳೆ ವಿಡಿಯೋ ಕಾನ್ಫರೇನ್ಸ್ ಮೂಲಕ ವಕೀಲ ದೀಪಕ್ ಖೋಸ್ಲಾ ವಾದ ಮಂಡಿಸಿದರು. ಎಫ್ಐಆರ್ ದಾಖಲಿಸಿದ್ದೆ ಕಾನೂನುಬಾಹಿರ ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಎಫ್ಐಆರ್ ದಾಖಲಿಸಬಾರದಿತ್ತು ಎಂದು ವಾದಿಸಿದರು.
ಈ ವೇಳೆ ಇಷ್ಟೊಂದು ನೋಟಿಸ್ ಕೊಟ್ಟಿರೋದು ಯಾಕೆ ಎಂಂದು ಪ್ರಶ್ನಿಸಿರುವ ಕೋರ್ಟ್, ಪ್ರತ್ಯೇಕ ಎಫ್‌ಐಆರ್ ದಾಖಲಿಸಬಹುದಿತ್ತಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದಕ್ಕೆ ಉತ್ತರಿಸಿರುವ ಎಸ್‌ಪಿಪಿ ಜಗದೀಶ್, ದಾಖಲಿಸಿರುವ ಎಫ್ಐಆರ್ನಲ್ಲೇ ತನಿಖೆ ಮುಂದುವರಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪಿದೆ. 35(3) ಅಡಿ ನೋಟಿಸ್ ಜಾರಿಗೊಳಿಸಿದ ಬಳಿಕ ಅರ್ಜಿದಾರರು ಬಂದಿಲ್ಲ. ಈಗ ಹೊಸದಾಗಿ 35(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದರು.








