ಬೆಂಗಳೂರು: ತುಮಕೂರಿನಲ್ಲಿ ಕೋಪರೇಟಿವ್ ಸೊಸೈಟಿಯನ್ನು ಬ್ಯಾಂಕ್ ಮಾಡಬೇಕು ಎಂಬ ಪ್ರಯತ್ನ ಮಾಡಲಾಗುತ್ತಿದೆ. ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ಸಮಾಜ ಕಲ್ಯಾಣ ಸಚಿವರನ್ನು ಭೇಟಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು.
ಕ್ರೆಸೆಂಟ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ತಂದೆಯವರು 1994ರಲ್ಲಿ ಹರ್ತಿಕೋಟೆ ಕೋಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿದ್ದರು. ದಲಿತ ಸಮುದಾಯದಿಂದ ಸಂಸ್ಥೆ ಪ್ರಾರಂಭಿಸಿ ಸೇವೆ ಮಾಡಿಕೊಂಡು ಬರಲಾಗಿದೆ. ನಮ್ಮ ತಂದೆಯವರು ತೀರಿಕೊಂಡ ನಂತರ, ನಾನೇ ಅದರ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. 3500 ಜನ ಸದಸ್ಯರಿದ್ದಾರೆ. ಕೋಆಪರೇಟಿವ್ ಸೊಸೈಟಿಯನ್ನು ಬ್ಯಾಂಕ್ ಮಾಡಬೇಕೆಂಬ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರದಿಂದ ಜಾಗ ಕೊಟ್ಟಿದ್ದಾರೆ. ಆ ಜಾಗದಲ್ಲಿ ಹೊಸ ಕಟ್ಟಡ ಕಟ್ಟಬೇಕು. ಸಮಾಜ ಖ್ಯಾಣ ಇಲಾಖೆಯಿಂದ ಸಹಾಯ ಆಗಬಹುದು ಎಂಬ ನಿಟ್ಟಿನಲ್ಲಿ ಹೆಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಲು, ಸೊಸೈಟಿಯ ನಿರ್ದೇಶಕರು ಮತ್ತು ಸದಸ್ಯರು ಸಮಯ ತೆಗೆದುಕೊಂಡಿದ್ದರು. ನಾನು ಕೋಆಪರೇಟಿವ್ ಅಧ್ಯಕ್ಷನಾಗಿ, ಮನವಿ ನೀಡಲು ಬಂದಿದ್ದೇನೆ.
ಸರ್ಕಾರದ ವತಿಯಿಂದ ಏನು ಸಹಾಯ ಅಗುತ್ತದೆ ಮಾಡಿಕೊಡುತ್ತೇವೆ ಎಂದು ಮಹದೇವಪ್ಪ ಅವರು ಹೇಳಿದ್ದಾರೆ. ಇದರಲ್ಲಿ ರಾಜಕೀಯ ವಿಶೇಷತೆ ಏನು ಇಲ್ಲ ಎಂದು ಹೇಳಿದರು.
ದಲಿತ ಸಮಾವೇಶ ನಡೆಸುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮಾವೇಶ ಮಾಡೋದಿಕ್ಕೆ ಎನು ತೊಂದರೆ ಇದೆ. ಈ ಹಿಂದೆ ಹೈಕಮಾಂಡ್‌ನವರು ಬೇರೆ ಕಾರಣಕ್ಕಾಗಿ ಸಮಾವೇಶ ಸ್ಥಗಿತ ಮಾಡುವಂತೆ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡಿದ್ದೆವು. ಪಕ್ಷದ ಹಿತದೃಷ್ಟಿಯಿಂದ, ದಲಿತ ಸಮುದಾಯ ಯಾವತ್ತು ಕಾಂಗ್ರೆಸ್ ಪಕ್ಷದ ಜೊತೆಗೆ ಇರುತ್ತದೆ. ನಾವೆಲ್ಲ ಒಟ್ಟಿಗೆ ಇರಬೇಕಾದರೆ ಆಗಾಗ ಸಮಾವೇಶಗಳನ್ನು ಮಾಡಿ, ಸರ್ಕಾರದ ವತಿಯಿಂದ ಏನೆಲ್ಲ ಯೋಜನೆಗಳನ್ನು ದಲಿತ ಸಮುದಾಯಕ್ಕೆ ನೀಡಲಾಗಿದೆ ಎಂಬುದನ್ನು ಹೇಳಬೇಕಾಗುತ್ತದೆ. ಸಮುದಾಯದಿಂದ ಏನು ಕೇಳುತ್ತಾರೆ, ಮುಂದಿನ ಭರವಸೆಗಳನ್ನು ಕೊಡಬೇಕಾಗುತ್ತದೆ ಎಂದರು.
ದಲಿತ ಸಿಎಂ ಮಾಡಬೇಕು ಎಂದು ದಲಿತ ಸಂಘಟನೆಗಳ ಒತ್ತಾಯದ ಕುರಿತು ಮಾತನಾಡಿ, ಅವರು ಒತ್ತಾಯ ಮಾಡುವುದು ತಪ್ಪು ಇದೆಯೇ? ತಪ್ಪಿದೆ ಅಂದರೆ ಅದಕ್ಕೆ ಉತ್ತರ ಕೊಡೋಣ. ಅವರವರ ಅಭಿಪ್ರಾಯ ಹೇಳುತ್ತಾರೆ ಎಂದರು.
ಸಿಎಂ ಆಗಲು ಪರಮೇಶ್ವರ, ಸತೀಶ್ ಜಾರಕಿಹೊಳಿ ಸಮರ್ಥರಿದ್ದಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ. ಕಾಂಗ್ರೆಸ್ ಪಾರ್ಟಿ ಅನೇಕ ಜನ ಮುಖಂಡರನ್ನು ಹುಟ್ಟು ಹಾಕಿದೆ. ಬೇರೆ ಪಕ್ಷಗಳಿಗೆ ಹೋಗಿ ದೊಡ್ಡವರಾದರು. ನಮ್ಮ ಪಾರ್ಟಿ ಟ್ರೈನಿಂಗ್ ಸ್ಕೂಲ್ ಇದ್ದಂತೆ. ಎಲ್ಲ ಪಕ್ಷದವರಿಗೂ ತರಬೇತಿ ನೀಡಿ ಕಳಿಸುತ್ತಿರುತ್ತೇವೆ. ನಮ್ಮಲ್ಲಿ ಬಹಳ ಜನ ಮುಖಂಡರು ಸಮರ್ಥರಿದ್ದಾರೆ. ಅದರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಹೇಳಿದರು
2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾವು ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡಿದಾಗ, ಯಾವುದೇ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಎಂದು ಯಾರು ಹೇಳಿರಲಿಲ್ಲ. ಸಮಯ ನಿಗದಿಯೂ ಮಾಡಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಎಂದು ನಾವು ಆಯ್ಕೆ ಮಾಡಿದ್ದೇವೆ. ಮಧ್ಯದಲ್ಲಿ ಹೈಕಮಾಂಡ್‌ನವರು ಏನಾದರು ತೀರ್ಮಾನ ಮಾಡಿದ್ದರೆ ಅವರಿಗೆ ಬಿಟ್ಟದ್ದು. ಅದಕ್ಕೆ ನಾವು ಹೇಳಲು ಅಗುತ್ತ? ದಿನನಿತ್ಯ ನಾವು ಸ್ಟೇಟ್‌ಮೆಂಟ್ ಕೊಟ್ಟುಕೊಂಡು ಕೂತ್ಕೊಂಡ್ರೆ ಸರಿಯಲ್ಲ. ಇದನ್ನು ಕ್ಲಿಯರ್ ಮಾಡುವಂತೆ ಸಂದರ್ಭ ಬಂದಾಗ ಹೈಕಮಾಂಡ್‌ನವರಿಗೆ ಮನವಿ ಮಾಡುತ್ತೇನೆ ಎಂದರು.
BREAKING: ‘ಕನ್ನಡ ಸಾಹಿತ್ಯ ಪರಿಷತ್ತಿ’ಗೆ ಆಡಳಿತಾಧಿಕಾರಿ ನೇಮಿಸಿ ‘ರಾಜ್ಯ ಸರ್ಕಾರ’ ಆದೇಶ








