ಹಾಸನ : ಹಾಸನದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಕಳೆದ ಐದು ದಿನಗಳ ಹಿಂದೆ ಅಡುಗೆ ಅನಿಲ ಸೋರಿಕೆಯಿಂದಾಗಿ ಸುಟ್ಟಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಪೈಕಿ ಪತ್ನಿ ಸಾವನ್ನಪ್ಪಿದ್ದು, ಪತಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೋಭಾ (42) ಮೃತಪಟ್ಟವರು ಎಂದು ತಿಳಿದುಬಂದಿದೆ.
ನಗರದ ವೀರಾಂಜನೇಯ ಬಡಾವಣೆ ನಿವಾಸಿ, ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಕುಮಾರ್ ಹಾಗು ಶೋಭಾ ಅ.23ರಂದು ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಸೋರಿಕೆಯಾಗಿ ಮನೆಯಲ್ಲಿ ಪದಾರ್ಥಗಳಿಗೆ ಒಮ್ಮೆಲೆ ಬೆಂಕಿ ಹತ್ತಿಕೊಂಡು ಇಡೀ ಮನೆ ಆವರಿಸಿದ್ದು,ಪತಿ ಕುಮಾರ್ ರಕ್ಷಿಸಲು ಹೋಗಿ ಅವರು ಸಹ ತೀವ್ರಗಾಯಗೊಂಡಿದ್ದರು.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅ.27ರ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಶೋಭಾ ಸಾವನ್ನಪ್ಪಿದ್ದಾರೆ. ಪತಿ ಕುಮಾರ್ ಸಹ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿಯ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








