ನವದೆಹಲಿ : ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಂಡು ವರದಿ ಸಲ್ಲಿಸದ ರಾಜ್ಯಗಳಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಪಶ್ಚಿಮಬಂಗಾಳ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಅನುಸರಣಾ ವರದಿಗಳನ್ನು ಸಲ್ಲಿಸಲು ವಿಫಲರಾದ ಕಾರಣ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ಈ ಕುರಿತು ಸೂಚನೆ ನೀಡಿದ್ದು, ಮುಂದಿನ ವಿಚಾರಣೆ ನವೆಂಬರ್ 3ರಂದು ಅಧಿಕಾರಿಗಳು ಹಾಜರಾಗದಿದ್ದರೆ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿತು. ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹೆತ ಹಾಗೂ ಎನ್.ವಿ ಅಂಜಾರಿಯಾ ಅವರ ಪೀಠದಿಂದ ಆದೇಶ ಹೊರಡಿಸಲಾಗಿದೆ.
2023ರ ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅನುಷ್ಠಾನದ ಕುರಿತು ವರದಿ ಸಲ್ಲಿಸದ ರಾಜ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದುವರೆಗೂ ಪಶ್ಚಿಮಬಂಗಾಳ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳು ಮಾತ್ರ ಪಾಲಿಸಿದ್ದು ನವೆಂಬರ್ 3ರಂದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಜರಿರಬೇಕು. ನಾವು ಸಭಾಂಗಣದಲ್ಲಿ ಕಲಾಪ ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್ ಇದೆ ಸಂದರ್ಭದಲ್ಲಿ ತಿಳಿಸಿದೆ.








